10:28 PM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಮುಗಿಯದ ಕಾಮಗಾರಿ, ತಪ್ಪದ ಕಿರಿಕಿರಿ:365 ದಿನವೂ ಅಗೆಯುವುದು- ಮುಚ್ಚುವುದು!

November 3, 2020, 8:11 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆ ಎಂದರೆ ತಕ್ಷಣ ಜನಸಾಮಾನ್ಯರ ಕಣ್ಣ ಮುಂದೆ ಸುಳಿಯುವ ಚಿತ್ರಣವೆಂದರೆ ಅಗೆಯುವುದು- ಮುಚ್ಚುವುದು, ಕಟ್ಟುವುದು- ಬಿಚ್ಚುವುದು. ಪಾಲಿಕೆ ವ್ಯಾಪ್ತಿಯಲ್ಲಿ ವರ್ಷದ 365 ದಿನವೂ ಅಗೆಯುವ ಕಾಮಗಾರಿ ನಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ಸಾರ್ವಜನಿಕರಿಗೆ ಸಾಕಪ್ಪೋ ಸಾಕು ಎನ್ನುವಷ್ಟರ ಮಟ್ಟಿಗೆ ಇದು ನಡೆಯುತ್ತಲೇ ಇರುತ್ತದೆ. ಪಾಲಿಕೆ ಕಚೇರಿಯ ಮೂಗಿನಡಿಯಲ್ಲೇ ಲಾಲ್ ಭಾಗ್ ಸುತ್ತಮುತ್ತ ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ನಡೆಯುತ್ತಿರುವ  ಕಾಮಗಾರಿಯೇ ಇದಕ್ಕೆ ತಾಜಾ ನಿದರ್ಶನ.

ಪಾಲಿಕೆ ಮುಖ್ಯ ಕಚೇರಿ ಇರುವ ಲಾಲ್ ಭಾಗ್ ಪ್ರದೇಶದಲ್ಲಿ ಗುಂಡಿ ತೋಡುವುದು, ಮುಚ್ಚುವುದನ್ನು ಎಲ್ಲ ಸೀಸನ್ ಗಳಲ್ಲಿ ಕಾಣಬಹುದು. ಸಾಯಿಬಿನ್ ಕಾಂಪ್ಲೆಕ್ಸ್, ರಾಮಕೃಷ್ಣ ಲೇಡಿಸ್ ಹಾಸ್ಟೇಲ್ ಎದುರುಗಡೆ ಮಳೆ ನೀರಿನ ತೋಡು, ಫುಟ್ ಪಾತ್ ರಚನೆ, ಇಂಟರ್ ಲಾಕ್ ಕಾಮಗಾರಿ ಮುಗಿಯುವುದೇ ಇಲ್ಲ.

ಒಂದು ವರ್ಷ ಕಳೆದರೂ ಕಾಮಗಾರಿ ಮುಗಿದೇ ಇಲ್ಲ. ಕಾರಣ ಕೇಳಿದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಳೆ, ಚುನಾವಣೆ, ಕೊರೊನಾ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಇದೀಗ ಅದರೊಂದಿಗೆ ಹೊಸ ಕಾರಣ ಸೇರ್ಪಡೆಯಾಗಿದೆ. ಅದೇನೆಂದರೆ ಫೈಲ್ ಗಳೆಲ್ಲ ಮೇಯರ್ ಮೂಲಕವೇ ಪಾಸ್ ಆಗುವುದು ಎಂದು.

ಇದೀಗ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಲಾಲ್ ಬಾಗ್ ನಲ್ಲಿ ಮಳೆ ನೀರು ತೋಡು ಹಾಗೂ ಬಣ್ಣದ ಫುಟ್ ಪಾತ್, ಇಂಟರ್ ಲಾಕ್ ಕಾಮಗಾರಿ ಒಂದು ವರ್ಷದಿಂದ ನಡೆಯುತ್ತಿದೆ.  ರಾಮಕೃಷ್ಣ ಹಾಸ್ಟೆಲ್ ಎದುರುಗಡೆ ಕೆಲವು ತಿಂಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ರಸ್ತೆ ಬದಿಗೆ ರಿಬ್ಬನ್ ಕಟ್ಟಲಾಗಿದೆ. ಪಾದಚಾರಿಗಳು ಮೈಯೆಲ್ಲ ಕಣ್ಣಾಗಿ ಓಡಾಡುತ್ತಿದ್ದಾರೆ.

ಸಾಯಿಬಿನ್ ಸೈಡ್ ಸಿಟಿ ಬಸ್ ನಿಲ್ದಾಣದ ಬಳಿ ಕೆಲವೇ ತಿಂಗಳ ಅಂತರದಲ್ಲಿ ಎರಡೆರಡು ಬಾರಿ ಇಂಟರ್ ಲಾಕ್ ಅಳವಡಿಸಲಾಗಿದೆ. ಕಾಮಗಾರಿ ನಡೆಸಲು ಗುತ್ತಿಗೆದಾರರೂ ಇದ್ದಾರೆ. ಪಾಲಿಕೆಯಲ್ಲಿ ಬೇಕಾದಷ್ಟು ಎಂಜಿನಿಯರ್ ಗಳು ಕೂಡ ಇದ್ದಾರೆ. ಹಾಗೆ ಖರ್ಚಿಗೆ ಸಾರ್ವಜನಿಕರ ಹಣ ಕೂಡ ಇದೆ. ಯಾರದೋ ಹಣ ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ.

ನಗರದ ಬಿಜೈ ಜೈಲ್ ರೋಡ್ ನ ಸುಬ್ರಹ್ಮಣ್ಯ ನಗರದಲ್ಲಿ ಹೊಸತಾಗಿ ನಿರ್ಮಿಸಿದ ಫುಟ್ ಪಾತನ್ನು ಕೇಬಲ್ ಅಳವಡಿಸಲು ಅಗೆದಿರುವ ಕೀರ್ತಿ ಕೂಡ ಪಾಲಿಕೆಯ ಆಡಳಿತಕ್ಕೆ ಸಲ್ಲುತ್ತದೆ. ಇನ್ನು ಖಾಸಗಿ ಟೆಲಿಕಾಂನ 2ಜಿ, 3ಜಿ, 4ಜಿ, 5 ಜಿ  ಬಂದಾಗ ಅಗೆಯುವ ಕಾರ್ಯ ನಡೆಯುತ್ತಲೇ ಇರುತ್ತದೆ. ಸರಿಯಾದ ಯೋಜನೆ ಇಲ್ಲದೆ ಅನುದಾನ ಬಳಕೆ ಮಾಡುವ ಅಧಿಕಾರಿಗಳ ತುಡಿತ ಹಾಗೂ ಕಾರ್ಪೊರೇಟರ್ ಗಳಿಗೆ ತಮ್ಮ ವಾರ್ಡ್ ನಲ್ಲಿ ಇಷ್ಟು ಕೋಟಿ ಕಾಮಗಾರಿ ನಡೆದಿದೆ ಎನ್ನುವುದನ್ನು

ದಾಖಲೆಯಲ್ಲಿ ತೋರಿಸುವ ತವಕ ಇದಕ್ಕೆಲ್ಲ ಕಾರಣ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು