ಇತ್ತೀಚಿನ ಸುದ್ದಿ
ಟವರ್ ಧ್ವಂಸದಿಂದ ಬೆಚ್ಚಿಬಿದ್ದ ರಿಲಯನ್ಸ್: ಕೃಷಿ ವಿಧೇಯಕಕ್ಕೂಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿಯೇ ಬಿಟ್ಟಿತು!
January 4, 2021, 6:42 PM

ನವದೆಹಲಿ(reporterkarnataka newsp
ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಆಕ್ರೋಶ ತನ್ನತ್ತ ತಿರುಗುತ್ತಿರುವ ಹಿನ್ನೆಲೆಯಲ್ಲಿ ರಿಲಯನ್ಸ್ ಕಂಪನಿ ಕೊನೆಗೂ ಮೌನ ಮುರಿದಿದೆ. ಕೇಂದ್ರ ಸರಕಾರದ ಕೃಷಿ ವಿಧೇಯಕಕ್ಕೂ ರಿಲಯನ್ಸ್ ಕಂಪೆನಿಗೂ ಯಾವುದೇ ಸಂಬಂಧವಿಲ್ಲ. ಕಂಪೆನಿಗೆ ಕಾರ್ಪೊರೇಟ್ ಅಥವಾ ಕಾಂಟ್ರಾಕ್ಟ್ ಕೃಷಿಯಲ್ಲಿ ಯಾವುದೇ ಆಸಕ್ತಿಯಿಲ್ಲ, ಹಿಂದೆಯೂ ಇದನ್ನು ನಡೆಸಿಲ್ಲ, ಮುಂದೆಯೂ ನಡೆಸುವ ಯೋಚನೆಯಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಂ ಹೇಳಿದೆ.
ಕೇಂದ್ರದ ನೂತನ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ದಿಲ್ಲಿ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ವಿಧೇಯಕ ಜಾರಿಯ ಹಿಂದೆ ರಿಲಯನ್ಸ್ ಸಂಸ್ಥೆಯ ಪಾತ್ರವಿದೆ ಎಂದು ಆರೋಪಿಸಿ ರಾಜ್ಯದಲ್ಲಿನ ಹಲವಾರು ರಿಲಯನ್ಸ್ ಜಿಯೋ ಟವರುಗಳಿಗೆ ಹಾನಿಯೆಸಗಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರಿಂದ ಕಂಗಲಾಗಿರುವ ರಿಲಯನ್ಸ್ ಸಂಸ್ಥೆ ಕೋರ್ಟ್ ನ ಮೆಟ್ಟಿಲೇರಿದೆ. ತನ್ನ ಆಸ್ತಿಪಾಸ್ತಿಗಳ ರಕ್ಷಣೆಗೆ ಸರಕಾರದ ಹಸ್ತಕ್ಷೇಪವನ್ನು ಕೋರಿದೆ.
ಟವರ್ ಧ್ವಂಸಗೊಳಿಸುವ ಹಿಂಸಾತ್ಮಕ ಕೃತ್ಯಗಳು ನಮ್ಮ ಸಾವಿರಾರು ಉದ್ಯೋಗಿಗಳ ಜೀವಗಳಿಗೆ ಅಪಾಯ ಸೃಷ್ಟಿಸಿವೆ ಹಾಗೂ ಎರಡೂ ರಾಜ್ಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ಸ್ಥಾಪಿತ ಹಿತಾಸಕ್ತಿಗಳು ಹಾಗೂ ನಮ್ಮ ಉದ್ದಿಮೆ ಎದುರಾಳಿಗಳ ಕುಮ್ಮಕ್ಕಿನಿಂದ ಈ ದಾಂಧಲೆ ನಡೆಯುತ್ತಿದೆ ಎಂದು ರಿಲಯನ್ಸ್ ಹೇಳಿಕೆಯೊಂದರಲ್ಲಿ ಆರೋಪಿಸಿದೆ.
ರೈತರ ಪ್ರತಿಭಟನೆಯ ಲಾಭ ಪಡೆದು ಈ ಸ್ಥಾಪಿತ ಹಿತಾಸಕ್ತಿಗಳು ರಿಲಯನ್ಸ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಸುತ್ತಿವೆ. 130 ಕೋಟಿ ಭಾರತೀಯರ ಅನ್ನದಾತರ ಮೇಲೆ ರಿಲಯನ್ಸ್ ಸಂಸ್ಥೆಗೆ ಅತೀವ ಗೌರವವಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.