ಇತ್ತೀಚಿನ ಸುದ್ದಿ
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ, ಆರು ತಿಂಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ
August 24, 2020, 1:01 PM

ನವದೆಹಲಿ(reporterkarnataka news): ಏಳು ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಯುವ ನಿರ್ಣಯವನ್ನು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕೈಗೊಂಡಿದೆ. ಸೋನಿಯಾ ಗಾಂಧಿ ಅವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆರು ತಿಂಗಳ ಒಳಕೆ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಇದರಿಂದಾಗಿ ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ಪಕ್ಷ ಮುನ್ನೆಡೆಸುವ ಅವಕಾಶ ದೊರೆಯುವ ಸಾಧ್ಯತೆ ಕ್ಷೀಣಿಸಿದೆ. ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಮುಂದುವರಿದರೂ ಪ್ರಮುಖ ತೀರ್ಮಾನಗಳನ್ನು ರಾಹುಲ್ ಗಾಂಧಿ ಮತ್ತು ಅವರ ಆಪ್ತ ಬಳಗವೇ ಕೈಗೊಳ್ಳಲಿದೆ ಎಂಬ ಭೀತಿ ಕೂಡ ಕೆಲವು ನಾಯಕರನ್ನು ಕಾಡುತ್ತಿದೆ.
ಇಂದು ಕಾಂಗ್ರೆಸ್ ಸಭೆ ಬಿರುಸಿನ ಆರೋಪ- ಪ್ರತ್ಯಾರೋಪಕ್ಕೆ ಕೂಡ ಸಾಕ್ಷಿಯಾಯಿತು. ರಾಹುಲ್ ಗಾಂಧಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಹಿರಿಯ ನಾಯಕ ಕಪಿಲ್ ಸಿಬಾಲ್ ಅವರನ್ನು ಕೆರಳಿಸಿತ್ತು. ಸಿಟ್ಟಿನಲ್ಲಿ ಟ್ವೀಟ್ ಮಾಡಿದ ಕಪಿಲ್ ಸಿಬಾಲ್ ಬಳಿಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ ಬಳಿಕ ಅದನ್ನು ಅಳಿಸಿ ಹಾಕಿದರು.
ಇನ್ನೊಬ್ಬ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೂಡ ವಾಗ್ದಾಳಿಗೆ ಬೇಸೆತ್ತು ಒಂದು ಹಂತದಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು.