ಇತ್ತೀಚಿನ ಸುದ್ದಿ
ಶ್ರೀನಿವಾಸಪುರ: ಸಾಂಗವಾಗಿ ನಡೆಯಿತು 25 ಗ್ರಾಮ ಪಂಚಾಯಿತಿಗಳ ಮತ ಎಣಿಕೆ
December 30, 2020, 8:26 PM

ಶ್ರೀನಿವಾಸಪುರ(reporterkarnataka news): ಇಲ್ಲಿನ ಎರಡು ಮತ ಎಣಿಕೆ ಕೇಂದ್ರಗಳಲ್ಲಿ ಬುಧವಾರ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಸಾಂಗವಾಗಿ ನಡೆಯಿತು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ,ವ್ಯವಸ್ಥೆಯನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದರು.
ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದರು. ಆದರೆ ಪಾಸ್ ಹೊಂದಿದ್ದ ವ್ಯಕ್ತಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.
ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಇ.ಗೋಪಾಲಗೌಡ ಹಾಗೂ ಅವರ ಪ್ರತಿಸ್ಪರ್ಧಿ ಎಂ.ಆರ್.ಶ್ರೀನಿವಾಸ್ ತಲಾ 299 ಮತ ಪಡೆದು ಕುತೂಹಲ ಮೂಡಿಸಿದರು. ಅಧಿಕಾರಿಗಳು ಲಾಟರಿ ಎತ್ತಿದಾಗ, ವಿಜಯ ಲಕ್ಷ್ಮಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಇ.ಗೋಪಾಲಗೌಡ ಅವರಿಗೆ ಒಲಿದಳು.
ಚಲ್ದಿಗಾನಹಳ್ಳಿ ಗ್ರಾಮದ ಎಲ್ಲ ಮೂರು ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಶ್ರೀನಿವಾಸ್, ಜೆ.ಸವಿತ, ರವಣಮ್ಮ ಆರಿಸಿಬರುವುದರ ಮೂಲಕ ವಿರೋಧ ಪಕ್ಷದವರು ಹುಬ್ಬೇರಿಸುವಂತೆ ಮಾಡಿದರು.
ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗೆ ವಿಜಯೋತ್ಸವ ಆಚರಿಸುವುದು, ತಮ್ಮ ನಾಯಕರ ಪರವಾಗಿ ಜಯಕಾರ ಹಾಕುವುದು ಸಮಾನ್ಯವಾಗಿತ್ತು.