ಇತ್ತೀಚಿನ ಸುದ್ದಿ
ಸೌಲಭ್ಯ ನೀಡದೆ ಸತಾಯಿಸುವ ಆ್ಯಂಟನಿ ವೇಸ್ಟ್ : ನಾಳೆಯಿಂದ ಕಾರ್ಮಿಕರ ಅನಿರ್ದಿಷ್ಟ ಮುಷ್ಕರ
January 1, 2021, 8:50 PM

Lಮಂಗಳೂರು(reporterkarnataka news): ಮಂಗಳೂರು ಮಹಾನಗರಪಾಲಿಕೆಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ
ಗುತ್ತಿಗೆದಾರ ಕಂಪನಿ ಆ್ಯಂಟನಿ ವೇಸ್ಟ್ನ ಕಾರ್ಮಿಕರು ಮತ್ತೆ ನಾಳೆಯಿಂದ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬೋನಸ್ ಹಾಗೂ ಇತರ 12 ಬೇಡಿಕೆಗಳನ್ನು ಆಗ್ರಹಿಸಿ ಮುಷ್ಕರ ನಡೆಯಲಿದೆ.
ಡಿಸೆಂಬರ್ 17ರಂದು ಕಾರ್ಮಿಕರ ಪ್ರತಿಭಟನೆ ವೇಳೆ ಸಲ್ಲಿಸಿದ್ದ ಒಟ್ಟು 12 ಬೇಡಿಕೆಗಳಲ್ಲಿ ಕೇವಲ ಒಂದನ್ನು ಮಾತ್ರ ಈಡೇರಿಸಲಾಗಿದೆ. ಉಳಿದವುಗಳ ಬಗ್ಗೆ ಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಶುಕ್ರವಾರ ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಡಿಸೆಂಬರ್ 31ರೊಳಗೆ ಬೋನಸ್ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಆ್ಯಂಟನಿ ವೇಸ್ಟ್ ಭರವಸೆ ನೀಡಿದ್ದರೂ ಕಾರ್ಯಗತ ಮಾಡುವಲ್ಲಿ ವಿಫಲವಾಗಿದೆ. ದೀಪಾವಳಿಗೆ ನೀಡಬೇಕಿದ್ದ ಬೋನಸ್ ಕ್ರಿಸ್ಮಸ್ ಕಳೆದು ಹೊಸ ವರ್ಷ ಬಂದರೂ ನೀಡಿಲ್ಲ. ನವೆಂಬರ್ ತಿಂಗಳ ಸಂಬಳವನ್ನು ಕೂಡ ಕಾರ್ಮಿಕರಿಗೆ ಇನ್ನೂ ಪಾವತಿಸಿಲ್ಲ ಎಂದು ನಾರಾಯಣ ಶೆಟ್ಟಿ ತಿಳಿಸಿದರು.
ಬೇಡಿಕೆಗಳು: ದಿನದ ಕೆಲಸದ ಅವಧಿಯನ್ನು 8 ಗಂಟೆಗೆ ನಿಗದಿಪಡಿಸಬೇಕು, ಹೆಚ್ಚುವರಿ ಕೆಲಸ ಮಾಡಿದರೆ ಸರಕಾರದ ನಿಯಮದ ಪ್ರಕಾರ ಓಟಿ ನೀಡಬೇಕು, ಕಾರ್ಮಿಕರ ವಿರುದ್ಧ ದಬ್ಬಾಳಿಕೆ ಮಾಡಿದ ಸೂಪರ್ವೈಸರ್ ಅವರ ಮೇಲೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಹಣಕಾಸು ದುರ್ಬಳಕೆ ಮಾಡಿದ ಸೂಪರ್ವೈಸರ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಕಾರ್ಮಿಕರಿಗೆ ಇಎಲ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು, ಭವಿಷ್ಯ ನಿಧಿ ಮತ್ತು ಇಎಸ್ಐಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಕಾರ್ಮಿಕರಿಗೆ ನೀಡಬೇಕು,
ವೇತನದ ಪೂರ್ಣ ವಿವರ (ಪೇಸ್ಲಿಪ್ ಅನ್ನು) ಎಲ್ಲರಿಗೂ ನೀಡಬೇಕು, ವೇತನದ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಜಾರಿಗೆ ತರಬೇಕು, ಕೋವಿಡ್ 19ರ ಲಾಕ್ಡೌನ್ ಅವಧಿಯಲ್ಲಿ ಊರಿಗೆ ಹೋಗಿ ಸಿಲುಕಿ ಹಾಕಿಕೊಂಡ ಕಾರ್ಮಿಕರಿಗೆ ಅವರ ಕಡತವನ್ನು ಪರಿಶೀಲಿಸಿ ವೇತನ ನೀಡಬೇಕು, ವಾಹನಗಳ ದುರಸ್ತಿಯನ್ನು ಅತಿ ಶೀಘ್ರದಲ್ಲಿ ಮಾಡಬೇಕು, ಪ್ರತಿ ತಿಂಗಳು ಕೆಲಸಗಾರರು ಹಾಗೂ ಆಡಳಿತ ವಿಭಾಗದ ಸಭೆಯನ್ನು ನಡೆಸಬೇಕು, ಈ ಸಭೆಯಲ್ಲಿ ಕುಂದುಕೊರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿತ್ತು. ಈ ಬೇಡಿಕೆಯನ್ನು ತಕ್ಷಣವೇ ಈಡೇರಿಸುವುದಾಗಿ ಸಂಸ್ಥೆಯು ಲಿಖಿತವಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಬರೆದುಕೊಟ್ಟಿದ್ದರು. ಆದರೆ ಇದೀಗ ಕಂಪನಿಯು ನೀಡಿರುವ ಭರವಸೆಯನ್ನು ಈಡೇರಿಸದೆ ಕಾರ್ಮಿಕರನ್ನು ಸತಾಯಿಸುತ್ತಿದೆ.
ಬೈಕಂಪಾಡಿಯಲ್ಲಿರುವ ಆಂಟನಿ ವೇಸ್ಟ್ನ ಕಚೇರಿಯ (ಹಿಂದಿನ ಮುಂಗಾರು ಕಚೇರಿಯ ಬಳಿ) ಬಳಿಕ ಎಲ್ಲ ಸಿಬ್ಬಂದಿಗಳು ಮುಷ್ಕರ ನಡೆಸಲು ಉದ್ದೇಶಿಸಿದ್ದಾರೆ.