ಇತ್ತೀಚಿನ ಸುದ್ದಿ
ದೂತವಾಸ ಕಚೇರಿ ಅಧಿಕಾರಿಗೆ 2 ಲಕ್ಷ ಡಾಲರ್ ಕಮಿಷನ್ ನೀಡಿದ್ದರೇ ಸ್ವಪ್ನಾ ಸುರೇಶ್ ?
August 9, 2020, 2:22 PM

ತಿರುವನಂತಪುರ(reporter Karnataka):
ಚಿನ್ನ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಯುಎಇ ದೂತವಾಸ ಕಚೇರಿಯ ಅಧಿಕಾರಿಯೊಬ್ಬರಿಗೆ 2 ಲಕ್ಷ ಡಾಲರ್ ಕಮಿಷನ್ ನೀಡಿರುವುದಾಗಿ ಚಿನ್ನ ಕಳ್ಳಸಾಗಣಿಕೆ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಪ್ನಾ ಸುರೇಶ್ ಹೇಳಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೇಂದ್ರ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ನಡೆಸಿದ ವಿಚಾರಣೆಯ ವೇಳೆ ಸ್ವಪ್ನಾ ಸುರೇಶ್ ಈ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 200 ಬಾರಿ ಚಿನ್ನ ಕಳ್ಳ ಸಾಗಾಟ ಮಾಡಿರುವುದಾಗಿ ತಿಳಿಸಿರುವ ಸ್ವಪ್ನಾ ಸುರೇಶ್, ಪ್ರತಿ ಬಾರಿಯೂ ದೂತವಾಸ ಕಚೇರಿಯ ಅಧಿಕಾರಿಯೊಬ್ಬರಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿರುವ ಯುಎಇ ದೂತವಾಸ ಕಚೇರಿಯ ಅಧಿಕಾರಿ ಹಣವನ್ನು ಯುರೋಪ್ ನಲ್ಲಿ ಆಸ್ತಿ ಖರೀದಿಸಲು ಹೂಡಿಕೆ ಮಾಡಿರುವುದಾಗಿ ತಿಳಿದು ಬಂದಿದೆ. ಸದ್ಯ ಅಧಿಕಾರಿ ಭಾರತದಿಂದ ಪಲಾಯನ ಮಾಡಿದ್ದಾರೆ.
ಚಿನ್ನ ಕಳ್ಳಸಾಗಾಟ ಸಂಬಂಧಿಸಿದಂತೆ ಸ್ವಪ್ನಾ ಸುರೇಶ್ ಅವರನ್ನು ಬೆಂಗಳೂರಿನ ಕೋರಮಂಗಲದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಬಂಧನದ ವೇಳೆ ಆಕೆಯಿಂದ 30 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಸದ್ಯ ಸ್ವಪ್ನಾ ಅವರನ್ನು ಕೇರಳದ ಎರ್ನಾಕುಳಂ ಜೈಲಿನಲ್ಲಿ ಇರಿಸಲಾಗಿದೆ.