ಇತ್ತೀಚಿನ ಸುದ್ದಿ
ಆರೆಸ್ಸೆಸ್ ಹಿರಿಯ ಪ್ರಚಾರಕ್ ಬಸ್ರಿಕಟ್ಟೆ ಶಿವಶಂಕರ್ ಇನ್ನಿಲ್ಲ
November 30, 2020, 10:47 PM

ಬೆಂಗಳೂರು(reporterkarnataka news): ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಶಿವಶಂಕರ್ಜಿ ಅವರು ಸೋಮವಾರ ನಿಧನರಾದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು.
ಶೃಂಗೇರಿ-ಕೊಪ್ಪ ಬಳಿಯ ಬಸ್ರಿಕಟ್ಟೆ ಕೆಮ್ಮಣ್ಣು(ಚಂದ್ರಗಿರಿ)ಮೂಲದವರಾದ ಅವರು ೧೯೫೪ರ ಸೆ.೧೫ರಂದು ಜನಾರ್ದನಯ್ಯ ಮತ್ತು ಗೌರಮ್ಮ ದಂಪತಿ ಪುತ್ರರಾಗಿ ಜನಿಸಿದವರು. ದಂಪತಿಗಿದ್ದ ಇಬ್ಬರು ಹೆಣ್ಣುಮಕ್ಕಳು , ನಾಲ್ವರು ಗಂಡು ಮಕ್ಕಳ ಪೈಕಿ ಇವರು ಬಿಬಿಎಂ ಶಿಕ್ಷಣ ಮುಗಿಸಿ ಸಂಘ ಪ್ರಚಾರಕರಾಗಿ ಬದುಕನ್ನು ರಾಷ್ಟ್ರ
ಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಚಾರಕ್ ಆಗಿದ್ದ ಅವರು ಸಾಗರ , ಉಡುಪಿ, ಬೆಂಗಳೂರಿನ ಜಯನಗರದಲ್ಲಿ ಪ್ರಚಾರಕ್ ಆಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅನಂತರ ಮಂಗಳೂರು ವಿಭಾಗ ಕಾರ್ಯಾಲಯ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.
ಸರಳ -ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದ ಅವರು, ಸಹೃದಯಿಯಾಗಿ ನೂರಾರು ಕುಟುಂಬಗಳ ಪ್ರೀತಿಗಳಿಸಿದ್ದರು. ಕಳೆದ ಆರು ತಿಂಗಳುಗಳಿಂದ ಅನಾರೋಗ್ಯ ಕಾರಣದಿಂದ ಅವರು ಚನ್ನೇನಹಳ್ಳಿ ವಿದ್ಯಾಕೇಂದ್ರದಲ್ಲಿ ವಿಶ್ರಾಂತಿಯಲ್ಲಿದ್ದರು. ಸೋಮವಾರ ಅಪರಾಹ್ನ ಮಲಗಿದ್ದವರು ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು.
ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಹುಟ್ಟೂರಿಗೆ ಒಯ್ಯಲಾಗಿದೆ.