ಇತ್ತೀಚಿನ ಸುದ್ದಿ
ರಂಗಕರ್ಮಿ ಶಿವಾನಂದ ಕರ್ಕೇರ ನಿಧನ ನಾಟಕ , ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಕಿಶೋರ್ ಡಿ. ಶೆಟ್ಟಿ
October 15, 2020, 9:50 PM

ಮಂಗಳೂರು(reporterkarnataka news) : ಹಿರಿಯ ನಾಟಕಕಾರ, ಸಾಹಿತಿ ಶಿವಾನಂದ ಕರ್ಕೇರ ಅವರ ಅಗಲುವಿಕೆ ನಾಟಕ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟು ಮಾಡಿದೆ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಮ್ಯಾಪ್ಸ್ ಕಾಲೇಜಿನಲ್ಲಿ ತುಳು ಪರಿಷತ್ ಹಾಗೂ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಗುರುವಾರ ನಡೆದ ಶಿವಾನಂದ ಕರ್ಕೇರಾ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಟಕ ಕಲಾವಿದರ ಯೋಗಕ್ಷೇಮದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಕರ್ಕೇರ ಅವರು ತನ್ನ ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾರ್ಯನಿರ್ವಹಿಸುತ್ತಿದ್ದವರು ಕಿಶೋರ್ ಶೆಟ್ಟಿ ಹೇಳಿದರು.
ಸಮಾರಂಭದಲ್ಲಿ ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ್ ನೀರ್ ಮಾರ್ಗ ಅವರು ಮಾತನಾಡಿ , ಕರ್ಕೇರ ಅವರು ತುಳು ಅಕಾಡೆಮಿ ಸದಸ್ಯರಾಗಿ ತುಂಬಾ ಬದ್ಧತೆಯಿಂದ ಕಾರ್ಯನಿರ್ವಹಿಸಿ , ಅಕಾಡೆಮಿ ವತಿಯಿಂದ ತುಳು ನಾಟಕೋತ್ಸವ ನಡೆಸಲು ಮೂಲ ಪ್ರೇರಕರಾಗಿದ್ದರು , ಅವರು ತನ್ನ ಇಳಿ ವಯಸ್ಸಿನಲ್ಲೂ ತುಳು ಎಂ.ಎ ವಿದ್ಯಾರ್ಥಿಯಾಗಿ ಪರೀಕ್ಷೆ ಮುಗಿಸಿದ ಅವರ ಜೀವನೋತ್ಸವ ಮೆಚ್ಚುವಂತಹದು ಎಂದು ಹೇಳಿದರು.
ತುಳು ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರು ಮಾತನಾಡಿ, ಕರ್ಕೇರ ಅವರು ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಯಾಂಕ್ ಗೆ ಸ್ವಂತ ಕಟ್ಟಡ ನಿರ್ಮಿಸಲು ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು .
ತುಳು ಪರಿಷತ್ ಇನ್ನೋರ್ವ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಅವರು ಮಾತನಾಡಿ , ಸಾಹಿತ್ಯ ,ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ ಕರ್ಕೇರಾ ಅವರು ಅಚ್ಚಳಿಯದ ನೆನಪುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಹೇಳಿದರು .
ಹಿರಿಯ ರಂಗಕರ್ಮಿ ತಮ್ಮ ಲಕ್ಷ್ಮಣ್ ಅವರು ಮಾತನಾಡಿ , ಶಿವಾನಂದ ಕರ್ಕೇರಾ ಅವರ ಅಶಕ್ತರಿಗೆ ಸದಾ ನೆರವು ನೀಡುತ್ತಿದ್ದರು , ಉದಾರ ದಾನಿಯಾಗಿದ್ದರು ಮಾತ್ರವಲ್ಲದೆ ನಾಟಕ , ಸಂಘಟನೆಗಳಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯ ವ್ಯಕ್ತಿಯಾಗಿ , ಕೌಟುಂಬಿಕ ನೆಲೆಯಲ್ಲಿ ಶಿಸ್ತುಬದ್ಧ ಜೀವನ ಮೌಲ್ಯವನ್ನು ತೊಡಗಿಸಿಕೊಂಡವರಾಗಿದ್ದರು ಎಂದು ಬಣ್ಣಿಸಿದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಅವರು ಮಾತನಾಡಿ , ಕರ್ಕೇರ ಅವರ ಹಸ್ತಪ್ರತಿಗಳ ಸಂಗ್ರಹವಾಗಬೇಕು , ಸಾಧನೆಯ ದಾಖಲೀಕರಣವಾಗಬೇಕೆಂದು ಹೇಳಿದರು.
ತುಳು ಎಂ.ಎ. ವಿದ್ಯಾರ್ಥಿ ಹರೀಶ್ ಅವರು ಮಾತನಾಡಿ, ತುಳು ಎಂ.ಎ. ಪಠ್ಯದ ರಂಗಭೂಮಿ ಪಠ್ಯದಲ್ಲಿ ಶಿವಾನಂದ ಕರ್ಕೇರ ಅವರ ಹೆಸರು ಉಲ್ಲೇಖಗೊಂಡಿದ್ದನ್ನು ಓದುವಾಗ ವಿದ್ಯಾರ್ಥಿಗಳು ಅವರ ಬಗ್ಗೆ ಅಭಿಮಾನ ಪಡುತ್ತಿದ್ದರು , ಹಿರಿಯ ವಿದ್ಯಾರ್ಥಿಯಾಗಿ ಅವರು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹಮಹಿಯಾಗಿದ್ದು , ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು .
ಸಂಸ್ಕಾರ ಭಾರತಿ ಸಂಘಟನೆಯ ಸಂಚಾಲಕ ಚಂದ್ರಶೇಖರ್ ಶೆಟ್ಟಿ , ತುಳು ಪರಿಷತ್ ಉಪಾಧ್ಯಕ್ಷ ಡಾ.ವಾಸುದೇವ ಬೆಳ್ಳೆ , ಹಿರಿಯ ಸಂಘಟಕ ಎಂ.ಎಸ್ .ರಾವ್ , ನಾಟಕ ಕಲಾವಿದರ ಒಕ್ಕೂಟದ ಕ್ಷೇಮನಿಧಿ ಸಂಚಾಲಕ ಪ್ರದೀಪ್ ಆಳ್ವಾ , ಪ್ರಧಾನ ಕೋಶಾಧಿಕಾರಿ ಮೋಹನ್ ಕೊಪ್ಪಳ , ಲೇಖಕ ರಘು ಇಡ್ಕಿದು , ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಅವರು ನುಡಿ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ಸೇವಾದಳ ಅಧ್ಯಕ್ಷ ಸುರೇಶ್ ಶೆಟ್ಟಿ, ಪರಿಷತ್ ಖಜಾಂಚಿ ಸುಬೋಧಯ ಆಳ್ವಾ , ಲಯನ್ಸ್ ಕ್ಲಬ್ ನ ತಾರಾನಾಥ್ ಶೆಟ್ಟಿ ಬೋಳಾರ್ , ತುಳು ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಗೋಕುಲ್ ಕದ್ರಿ , ಒಕ್ಕೂಟ ಜೊತೆ ಕಾರ್ಯದರ್ಶಿ ಶೋಭಾ ಶೆಟ್ಟಿ , ತುಳು ಅಕಾಡೆಮಿ ಮಾಜಿ ಸದಸ್ಯೆ ಸುಧಾ ನಾಗೇಶ್, ಲಲಿತಕಲಾ ಆರ್ಟ್ಸ್ ನ ಧನ್ ಪಾಲ್ ಶೆಟ್ಟಿಗಾರ್ , ನಾಟಕ ಕಲಾವಿದರ ಒಕ್ಕೂಟದ ಕ್ಷೇಮ ನಿಧಿ ಸಹ ಸಂಚಾಲಕ ರಾಘವ ಭಟ್ ಶರವು , ದಿನೇಶ್ ಕುಂಪಲ , ನಾಗೇಶ್ ದೇವಾಡಿಗ , ಹರೀಶ್ ಶಕ್ತಿನಗರ , ಮಧು ಬಂಗೇರಾ , ಕಿಶೋರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ಹಿಸಿದರು, ತುಳು ನಾಟಕ ಕಲಾವಿದರ ಒಕ್ಕೂಟದ ಖಜಾಂಚಿ ಮೋಹನ್ ಕೊಪ್ಪಳ ವಂದಿಸಿದರು.