ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ , ಸೀಲ್ ಡೌನ್ ಗುಮ್ಮ: ಇದೀಗ ಎಲ್ಲರ ಗಮನ ಸಿಎಂನತ್ತ
December 30, 2020, 6:47 PM

ಬೆಂಗಳೂರು(reporterkarnataka news): ರಾಜ್ಯದಲ್ಲಿ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಗುಮ್ಮ ಎದುರಾಗಿದೆ. ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರಿತ ಕೊರೊನಾ ವೈರಸ್ ರಾಜ್ಯದಲ್ಲಿ 11 ಮಂದಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಹೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಒಟ್ಟು 11 ಮಂದಿಯಲ್ಲಿ ಹೊಸ ತಳಿಯ ವೈರಾಣು ಪತ್ತೆಯಾಗಿದೆ. ಇವರಲ್ಲಿ 7 ಮಂದಿ ಬೆಂಗಳೂರಿನವರಾಗಿದ್ದು, ಉಳಿದ ನಾಲ್ವರು ಶಿವಮೊಗ್ಗ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮುಖ್ಯಮಂತ್ರಿ ಅವರ ತವರು ಜಿಲ್ಲೆಯ ಶಿವಮೊಗ್ಗ ಹಾಗೂ ಶಕ್ತಿಕೇಂದ್ರ ಬೆಂಗಳೂರಿನಲ್ಲಿ ಹೊಸ ವೈರಸ್ ಪತ್ತೆಯಾಗಿರುವುದು ಯಡಿಯೂರಪ್ಪ ಅವರ ಚಿಂತೆಗೆ ಪ್ರಮುಖ ಕಾರಣವಾಗಿದೆ. ಅದಲ್ಲದೆ ಜನವರಿ 1ರಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕಾಲೇಜುಗಳನ್ನು ತೆರೆಯಲು ಸರಕಾರ ನಿರ್ಧರಿಸಿದೆ. ಹೊಸ ತಳಿಯ ವೈರಸ್ ಈ ಹಿಂದಿನ ವೈರಸ್ ಗಿಂತ ದುರ್ಬಲವಾಗಿದ್ದರೂ ಅದರ ಹರಡುವಿಕೆಯ ವೇಗ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೊಮ್ಮೆ ಯೋಚನೆ ಮಾಡುವ ಸಂದಿಗ್ಧತೆಗೆ ಸಿಲುಕಿದೆ.
ಯಾವುದಕ್ಕೂ ಮುಖ್ಯಮಂತ್ರಿ ನಾಳೆ ಯಾವ ನಿರ್ಧಾರ ಪ್ರಕಟಿಸುತ್ತಾರೆ ಎನ್ನುವುದು ಮುಖ್ಯವಾಗಿದೆ.