ಇತ್ತೀಚಿನ ಸುದ್ದಿ
ರಾಜ್ಯ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನರಾಗ ಶುರು: ಬಿಎಸ್ ವೈ, ನಳಿನ್ ಗೆ ನಿಯಂತ್ರಣ ಸಾಧ್ಯವೇ?
January 13, 2021, 9:24 PM

ರಾಜೀವೀಸುತ ಬೆಂಗಳೂರು
info.reporterkarnataka@gmail.com
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನರಾಗ ಕೇಳಿ ಬರತೊಡಗಿದೆ. ಶಿಸ್ತಿನ ಪಕ್ಷವೆಂದೇ ಕರೆಸಿಕೊಳ್ಳುವ ಕೇಸರಿ ಪಕ್ಷದಲ್ಲಿ ಹೈಕಮಾಂಡ್ ನ ಕಟ್ಟುನಿಟ್ಟಿನ ಸೂಚನೆಯ ನಡುವೆಯೂ ಅಸಮಾಧಾನದ ಹೊಗೆಯಾಡಲಾರಂಭಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸದಾ ಕತ್ತಿ ಝಳಪಿಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಾಂಬ್ ಸಿಡಿಸಿದ್ದಾರೆ. ಸಂಕ್ರಾಂತಿ ಬಳಿಕ ಯಡಿಯೂರಪ್ಪ ಅವರ ಅಧಃಪತನ ಆರಂಭವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಮೂರು ಬ್ಲ್ಯಾಕ್ ಮೇಲರ್ ಗಳನ್ನು ಸಚಿವರನ್ನಾಗಿ ಮಾಡುತ್ತಿದ್ದಾರೆ ಎಂದು ಯತ್ನಾಳ್ ದೂರಿದ್ದಾರೆ. ಅದೇ ರೀತಿ ಯಡಿಯೂರಪ್ಪ ಅವರ ಮಾನಸ ಪುತ್ರ ಎಂದು ತನ್ನನ್ನು ತಾನೇ ಕರೆಸಿಕೊಳ್ಳುತ್ತಿದ್ದ ಎಂ.ಪಿ. ರೇಣುಕಾಚಾರ್ಯ , ಲಾಬಿ ಮಾಡಿದವರಿಗೆ ಮಂತ್ರಿ ಪದವಿ ದೊರೆತಿದೆ. ನನಗೆ ಲಾಬಿ ಮಾಡುವ ಅಭ್ಯಾಸವಿಲ್ಲ. ಮಂತ್ರಿಗಿರಿ ಕೊಡಿ ಎಂದು ನಾನು ಯಾರಿಗೂ ಅರ್ಜಿ ಹಾಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಇದು ಬೆಂಗಳೂರು- ಬೆಳಗಾವಿ ಕ್ಯಾಬಿನೆಟ್ ಆಗಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ರಾಜೀನಾಮೆ ಪಡೆದ ಎಚ್. ನಾಗೇಶ್ ಅವರ ಬೆಂಬಲಿಗರು ಈಗಾಗಲೇ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ನಾಗೇಶ್ ಕೂಡ ಸಂಪುಟ ಸಭೆ ನಡೆಯುವ ವರೆಗೂ ರಾಜೀನಾಮೆ ನೀಡಿರಲಿಲ್ಲ. ರಾಜೀನಾಮೆ ನೀಡದಿದ್ದರೆ ಪದಚ್ಯುತಿ ಮಾಡುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ಕೂಡ ನೀಡಿದ್ದರು. ಇದನ್ನು ಅವರ ಬೆಂಬಲಿಗರು ತೀವ್ರವಾಗಿ ವಿರೋಧಿಸಿದ್ದಾರೆ.
ಪಕ್ಷದೊಳಗೆ ಇಷ್ಟೆಲ್ಲ ಬೆಳವಣಿಗೆ ನಡೆದರೂ, ಪಕ್ಷದೊಳಗೆ ಭಿನ್ನರಾಗ ಕೇಳಿ ಬರುತ್ತಿದ್ದರೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಕರಾವಳಿ ಶಾಸಕರನ್ನು ನಿಯಂತ್ರಿಸಿದ ಮಾದರಿಯಲ್ಲಿ ಯತ್ನಾಳ್, ರೇಣುಕಾಚಾರ್ಯ ಅವರನ್ನು ನಿಯಂತ್ರಿಸಲು ನಳಿನ್ ಕುಮಾರ್ ಗೆ ಸಾಧ್ಯವೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.