ಇತ್ತೀಚಿನ ಸುದ್ದಿ
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ
January 26, 2021, 8:46 PM

ಮಂಗಳೂರು(reporterkarnatakanews): ನಗರದ ವಿವಿಧ ಕಾಲೇಜುಗಳ ಸುಮಾರು 80 ಎನ್ ಎಸ್ ಎಸ್ ವಿದ್ಯಾರ್ಥಿಗಳು ರೇಡಿಯೋ ಸಾರಂಗ್ ಮತ್ತು ಟೀಮ್ ಬೊಸ್ಕಿ ಆರ್ಬ್ ಆಯೋಜಿಸಿದ ‘ಗಣರಾಜ್ಯೋತ್ಸವ ಪರೇಡ್ ಬೆಂಗ್ರೆ ಬೀಚ್ ನಲ್ಲಿ’ ಅಭಿಯಾನದಲ್ಲಿ ಪಾಲುಗೊಂಡು ಬೀಚ್ ಸ್ವಚ್ಛತೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ವರಿಷ್ಟ ಫಾ. ಮೆಲ್ವಿನ್ ಜೆ. ಪಿಂಟೊ, ನಾವು ನಮ್ಮ ದೇಶಪ್ರೇಮವನ್ನು ಕಾರ್ಯದ ಮೂಲಕ ತೋರಿಸಬೇಕೇ ವಿನ: ಮಾತಿನಿಂದ ಅಲ್ಲ. ಯಾವಾಗ ನಾವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮಾಜ ಕಟ್ಟುವಲ್ಲಿ ಸಹಕರಿಸುತ್ತೇವೆಯೋ ಆಗ ನಿಜವಾದ ದೇಶಭಕ್ತರಾಗುತ್ತೇವೆ, ಎಂದರು.
ಟೀಮ್ ಬೊಸ್ಕಿ ಕಳೆದ 99 ದಿನಗಳಿಂದ ಬೀಚ್ ಕ್ಲೀನಿಂಗ್ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ತನ್ನ 100ನೇ ದಿನದ ಸಂಭ್ರಮವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. (ಫಾ.) ಪ್ರವೀಣ್ ಮಾರ್ಟಿಸ್ ಅವರು ಟೀಮ್ ಬೊಸ್ಕಿ ಆರ್ಬ್ ಅನ್ನು ಅಭಿನಂದಿಸಿದರು. “ಉತ್ಸಾಹಿ ಯುವಕರು ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿ ಸಮಾಜಸೇವಾ ಕಾರ್ಯದ ಮೂಲಕ ನೈಜ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದಾರೆ,” ಎಂದರು.
ಬೆಂಗ್ರೆ ವಾರ್ಡಿನ ಕಾರ್ಪೊರೇಟರ್ ಮುನೀಬ್ ಬೆಂಗ್ರೆ ಮಾತನಾಡಿ ತಮ್ಮೆಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಮಾತನಾಡಿ ಗಣರಾಜ್ಯೋತ್ಸವ ದಿನದ ಆಚರಣೆಯನ್ನು ಇಂತಹ ಸ್ವಚ್ಛತಾ ಕಾರ್ಯದ ಮೂಲಕ ಆಚರಿಸುವುದು, ಮಕ್ಕಳ ಮನಸಿನಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದಂತಾಗುತ್ತದೆ. ನೆಲ, ಜಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಯುವಕ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ರೇಡಿಯೋ ಸಾರಂಗ್ ನಿರ್ದೇಶಕರಾದ ಡಾ. (ಫಾ.) ಮೆಲ್ವಿನ್ ಪಿಂಟೊ,
ಕೆನರಾ ಕಾಲೇಜಿನ ಎನ್. ಎಸ್. ಎಸ್ ನ ಯೋಜನಾಧಿಕಾರಿ ಸೀಮಾ ಪ್ರಭು ಮತ್ತಿತರರು ಉಪಸ್ಥಿತರಿದ್ದರು.