ಇತ್ತೀಚಿನ ಸುದ್ದಿ
ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ ಬಿಡುಗಡೆ
October 21, 2020, 8:13 PM

ಮಂಗಳೂರು(reporterkarnatakanews):
ಒಂದು ವರ್ಷದ ಹಿಂದೆ ಪಚ್ಚನಾಡಿ ಡಂಪಿಂಗ್ ಪ್ರದೇಶದಲ್ಲಿ ಉಂಟಾದ ತ್ಯಾಜ್ಯ ದುರಂತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರಕಾರ 14 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆಯಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ನಿರ್ಮಿಸಿದ ತಡೆಗೋಡೆ ಕುಸಿದು ಬಿದ್ದಿತ್ತು. ಇದರ ಪರಿಣಾಮ ಸಮೀಪದ ಮಂದಾರ ಜನವಸತಿ ಪ್ರದೇಶವು ತ್ಯಾಜ್ಯದಿಂದ ಸಮಾಧಿಯಾಗಿತ್ತು. ಸುಮಾರು 26 ಕುಟುಂಬಗಳು ಬೀದಿಗೆ ಬಿದ್ದಿದ್ದವು.



ಇವರಿಗೆ ಕುಡುಪು ಸಮೀಪ ಗೃಹ ನಿರ್ಮಾಣ ಮಂಡಳಿ ನಿರ್ಮಿಸಿದ ವಸತಿ ಸಂಕೀರ್ಣದಲ್ಲಿ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ರಾಜಕಾರಣಿ ಹಾಗೂ ಅಧಿಕಾರಿಗಳ ದಂಡೇ ಇಲ್ಲಿಗೆ ಭೇಟಿ ನೀಡಿತ್ತು. ಇದೀಗ ಒಂದು ವರ್ಷದ ದೀರ್ಘ ಹೋರಾಟದ ಬಳಿಕ ರಾಜ್ಯ ಸರಕಾರ 14 ಕೋಟಿ ಬಿಡುಗಡೆಗೊಳಿಸಿದೆ.

ಭೂ ಕುಸಿತ ಉಂಟಾಗಿರುವ ಪಚ್ಚನಾಡಿ, ಕುಡುಪು ಪ್ರದೇಶಗಳಿಗೆ ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿ, ಕುಡುಪು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಂಟಾದ ಭೂ ಕುಸಿತದಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ


ಅಂದಾಜು 20 ಕೋಟಿ ಪರಿಹಾರ ಪಾವತಿಸುವಂತೆ ಸರಕಾರಕ್ಕೆ ಸಂಸದರು ಹಾಗೂ ಶಾಸಕರುಗಳು ವಿಶೇಷ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಎಸ್ಎಫ್ ಸಿ 2019-20ನೇ ಸಾಲಿನ ವಿಶೇಷ ಅನುದಾನದಿಂದ 14 ಕೋಟಿ ಬಿಡುಗಡೆಗೊಳಿಸಿದೆ. ಈ ಹಿಂದೆಯೇ ರಾಜ್ಯ ಸರಕಾರವು 8 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಅದರ ಮುಂದಿನ ಹಂತವಾಗಿ 14 ಕೋಟಿ ಅನುದಾನವನ್ನು ಈಗ ಬಿಡುಗಡೆಗೊಳಿಸಿದೆ.