ಇತ್ತೀಚಿನ ಸುದ್ದಿ
ನೈಟ್ ಕರ್ಫ್ಯೂ ಸಮಯ ಬದಲಾವಣೆ: ಹೋಟೆಲ್, ಬಾರ್ ಲಾಬಿಗೆ ಮುಖ್ಯಮಂತ್ರಿ ಮಣಿದರೇ?
December 23, 2020, 10:59 PM

ರಾಜೀವಿಸುತ ಬೆಂಗಳೂರು
info.reporterkarnataka@gmail.com
ಹಿಂದೆಲ್ಲ ಮುಖ್ಯಮಂತ್ರಿ ಒಮ್ಮೆ ನಿರ್ಧಾರಕ್ಕೆ ಬಂದ್ರೆ ಆಯಿತು, ಮುಂದೆ ಯಾವುದೇ ಬದಲಾವಣೆಗಳಿರುವುದಿಲ್ಲ. ಆದರೆ ಇಂದಿನ ಮುಖ್ಯಮಂತ್ರಿಗಳು ಬೆಳಗ್ಗೆ ಹೇಳಿದ್ದು ಮಧ್ಯಾಹ್ನ ಬದಲಾಗುತ್ತದೆ. ಮಧ್ಯಾಹ್ನ ಹೇಳಿದ್ದು ಸಂಜೆ ಚೇಂಜ್ ಆಗುತ್ತದೆ. ಇದೀಗ ನಡೆದದ್ದು ಕೂಡ ಅದೇ. ನೈಟ್ ಕರ್ಫ್ಯೂ ಕುರಿತು ಸಿಎಂ ಯಡಿಯೂರಪ್ಪ ಹೇಳಿದ್ದು ಸಂಜೆಯಾಗುವಾಗತ್ತಲೇ ಬದಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಮಧ್ಯಾಹ್ನ ವೇಳೆಗೆ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿಯಾಗುತ್ತದೆ. ರಾತ್ರಿ 10ರಿಂದ ಮುಂಜಾನೆ 6ರ ತನಕ ಎಂದು ಹೇಳಿದ್ದರು. ಆದರೆ ಸಂಜೆಯಾಗುವಾಗತ್ತಲೇ ಇದರಲ್ಲಿ ಬದಲಾವಣೆಯಾಗಿದೆ. ನೈಟ್ ಕರ್ಫ್ಯೂ ನಾಳೆಯಿಂದ ಜಾರಿ, ಜತೆಗೆ ರಾತ್ರಿ 11 ಗಂಟೆಯಿಂದ ಮುಂಜಾನೆ 5ರ ತನಕ ಎಂಬ ಪರಿಷ್ಕರಣೆ ಮಾಡಲಾಯಿತು. ಮುಖ್ಯಮಂತ್ರಿಗಳು ಅಷ್ಟು ಬೇಗ ನಿರ್ಧಾರ ಬದಲಾಯಿಸಬೇಕಾದರೆ ಯಾವುದಾದರೂ ಪ್ರಬಲ ಲಾಬಿಗೆ ಮಣಿದರೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಇದೀಗ ಕಾಡಲಾರಂಭಿಸಿದೆ.
ಯಾರದು ಲಾಬಿ?: ನೈಟ್ ಕರ್ಫ್ಯೂ ಗೆ ಹೋಟೆಲ್, ಬಾರ್, ಪಬ್, ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿ ಹಾಗೂ ಟ್ಯಾಕ್ಸಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ಫ್ಯೂ ಜಾರಿಗೊಳಿಸುವುದಾದರೂ ಸಮಯ ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ತೀವ್ರ ಒತ್ತಡ ತರಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮ್ಮ ನಿರ್ಧಾರದಲ್ಲಿ ಬದಲಾವಣೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಹೆಸರಿಗಷ್ಟೇ ಕರ್ಫ್ಯೂ: ಎಲ್ಲಕ್ಕಿಂತ ಮುಖ್ಯವಾಗಿ ಇದೊಂದು ಹೆಸರಿಗಷ್ಟೇ ಇರುವ ಕರ್ಫ್ಯೂ ಆಗಿದೆ. ಇದರಿಂದ ದೂರದ ಊರಿಗೆ ರಾತ್ರಿ ತೆರಳುವವರಿಗೆ ಯಾವುದೇ ತೊಂದರೆಯಾಗದು. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ನೈಟ್ ಸರ್ವಿಸ್ ಬಸ್ ಗಳು ಓಡಾಟ ನಡೆಸಲಿವೆ. ಟ್ಯಾಕ್ಸಿ ಸಂಚಾರ ಅಬಾಧಿತ. ರೈಲುಗಳು ಸಂಚರಿಸಲಿವೆ.