11:54 PM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಕುಡ್ಲದ ಪ್ರತಿ ಮನೆಯಲ್ಲೂ ಇರಲೇ ಬೇಕಾದ ಬಿ. ರವೀಂದ್ರ ಶೆಟ್ಟಿ ಅವರ ‘ನಮ್ಮ ಮಂಗಳೂರು’ ಕೃತಿ

September 28, 2020, 10:08 AM

ಮಂಗಳೂರು(reporterkarnataka news) : 

ಅದೊಂದು ಅಂತಿಂಥ ಸಾಮಾನ್ಯ ಪುಸ್ತಕವಲ್ಲ, ಮಾಹಿತಿಯ ಭಂಡಾರವೇ ಸರಿ. ಕಡಲನಗರಿ ಮಂಗಳೂರಿನ ಸಂಪೂರ್ಣ ಚಿತ್ರಣವನ್ನು ನೀಡಬಲ್ಲ ಸಮಗ್ರ ಮಾಹಿತಿ ಕೋಶ. ಇದರ ಕರ್ತೃ 

ಬೇರೆ ಯಾರೂ ಅಲ್ಲ, ಕರಾವಳಿಯಲ್ಲಿ ಕಳೆದ ಮೂರು ದಶಕಗಳಿಂದ ಜನಪರ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಿ. ರವೀಂದ್ರ ಶೆಟ್ಟಿ ಅವರು.

ಪ್ರಸ್ತುತ ರವೀಂದ್ರ ಶೆಟ್ಟಿ ಅವರು ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ದಶಕಗಳ ಸಮಗ್ರ ಅಧ್ಯಯನದ ಫಲವಾಗಿ `ನಮ್ಮ ಮಂಗಳೂರು’ ಕೃತಿ  ಮಂಗಳೂರಿನ ಸಮಗ್ರ ಮಾಹಿತಿ ಒದಗಿಸಲು ಸಾಧ್ಯವಾಗಿದೆ. ಮಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ ಪ್ರತಿನಿತ್ಯ ಪ್ರಯೋಜನವಾಗುವ ಎಲ್ಲ ಮಾಹಿತಿಗಳು ಈ ಕೃತಿಯಲ್ಲಿದೆ.

ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಎ. ವಿವೇಕ ರೈ ಅವರು ಮುನ್ನುಡಿ ಬರೆದಿದ್ದಾರೆ. ನಮ್ಮ ಮಂಗಳೂರು ಗ್ರಂಥವು ಮಂಗಳೂರಿನ ಎಲ್ಲ ಮಾಹಿತಿಯನ್ನು ಒದಗಿಸುವ ವಿಶ್ವಕೋಶದಂತಿದೆ ಎಂದು ಪ್ರೊ. ರೈ ಅವರು ಉಲ್ಲೇಖಿಸಿರುವುದು ಕೃತಿಗೆ ಒದಗಿದ ಮೊದಲ ಗೌರವವೇ ಆಗಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಕೃತಿಗೆ ಬೆನ್ನುಡಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಮಂಗಳೂರಿನ ಸಮಗ್ರ ದರ್ಶನ: ನಮ್ಮ ಮಂಗಳೂರು ಕೃತಿಯಲ್ಲಿ

ದಕ್ಷಿಣ ಕನ್ನಡ ಜಿಲ್ಲೆಯನ್ನು ಇದುವರೆಗೆ ಪ್ರತಿನಿಧಿಸಿದ ಸಂಸದರು, ಮಂಗಳೂರು ಸುತ್ತಮುತ್ತಲಿನ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು, ದಕ್ಷಿಣ ಕನ್ನಡ ಜಿಲ್ಲೆಯ ಕಿರುನೋಟ, ಮಂಗಳೂರು ಮಹಾನಗರ ಪಾಲಿಕೆಯ  ಪ್ರಮುಖ ಅಂಕಿಅಂಶಗಳು, ಮಂಗಳೂರಿನ ಆಡಳಿತದ ಇತಿಹಾಸ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಆಡಳಿತ ನಡೆಸುವ ವ್ಯವಸ್ಥೆ ಸಮಗ್ರ ವಿವರಗಳಿವೆ. ಮಂಗಳೂರು ಮಹಾನಗರ ಪಾಲಿಕೆಗೆ ನಡೆದ 1983ರ ಮೊದಲ ಚುನಾವಣೆಯಿಂದ  2019ರ ವರೆಗಿನ ಚುನಾವಣೆಯ ಸಮಗ್ರ ವಿವರಗಳು, ಆಡಳಿತ ನಡೆಸಿದ ಪಕ್ಷಗಳು, ಜನಪ್ರತಿನಿಧಿಗಳ ವಿವರಗಳು, ವಿಶೇಷವಾಗಿ  ಒಟ್ಟು 36 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ಗಳಾಗಿ ಕರ್ತವ್ಯ ನಿರ್ವಹಿಸಿದವರ ಹೆಸರು, ಭಾವಚಿತ್ರಗಳಿವೆ. ಇದುವರೆಗೆ ಕರ್ತವ್ಯ ನಿರ್ವಹಿಸಿದ ಆಯುಕ್ತರುಗಳ ವಿವರಗಳು, ಸಾರ್ವಜನಿಕರಿಗೆ ಪಾಲಿಕೆಯಿಂದ ಏನೇನು ಸೌಲಭ್ಯಗಳು ದೊರೆಯುತ್ತವೆ. ಅವುಗಳನ್ನು ಪಡೆಯುವುದು ಹೇಗೆ ಸೇರಿದಂತೆ ಪಾಲಿಕೆಯ ಆಡಳಿತ ಹಾಗೂ ಸೌಲಭ್ಯದ ವಿವರಗಳು ಈ ಗ್ರಂಥದಲ್ಲಿ ಅಡಕವಾಗಿವೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕೆರೆಗಳು, ಪಾರ್ಕ್‍ಗಳು, ಮೈದಾನಗಳು, ಗ್ರಂಥಾಲಯಗಳು, ಉದ್ಯಾನವನಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಹೊಟೇಲ್ ಗಳು, ದೇವಸ್ಥಾನಗಳು, ದೈವಸ್ಥಾನಗಳು, ಚರ್ಚ್‍ಗಳು, ಮಸೀದಿಗಳು, ಮುಖ್ಯ ಪ್ರವಾಸಿ ತಾಣಗಳು, ಬ್ಲಡ್ ಬ್ಯಾಂಕ್‍ಗಳು, ನ್ಯಾಯಾಲಯ, ಇದುವರೆಗೆ ಬಿಡುಗಡೆಯಾಗಿರುವ ತುಳು ಸಿನಿಮಾಗಳು ಅದರ ನಿರ್ದೇಶಕರು, ಈ ಹಿಂದೆ ಇದ್ದ ಹಾಗೂ ಪ್ರಸ್ತುತವಿರುವ ಚಿತ್ರಮಂದಿರಗಳು, ಮಾಧ್ಯಮ ಸಂಸ್ಥೆ ಗಳ ವಿಳಾಸ ದೂರವಾಣಿ ಸಂಖ್ಯೆ, ಸ್ಮಾರ್ಟ್ ಸಿಟಿಯ ವಿವರಗಳು, ಪೊಲೀಸ್ ಠಾಣೆಗಳ ವಿವರಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಜಿಲ್ಲಾಧಿಕಾರಿಗಳು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರ ವಿವರಗಳು,  ಮಂಗಳೂರಿನಲ್ಲಿ ಸಂಚರಿಸುವ ಬಸ್ ರೂಟ್‍ಗಳು ಹೀಗೆ ಹತ್ತು ಹಲವು ವಿಚಾರಗಳು ಈ ಗ್ರಂಥದಲ್ಲಿ ಒಳಗೊಂಡಿವೆ. ಒಂದರ ಮೇಲ್ಲೊಂದರಂತೆ ಎಲ್ಲ ಮಾಹಿತಿಗಳನ್ನು ಪಡೆಯಬಹುದಾದ ಒಂದು ಪುಟ್ಟ ಪ್ಯಾಕೇಜ್ ನಂತಿರುವ ಇದು ಪ್ರತಿಯೊಬ್ಬ ನಾಗರಿಕರಿಗೂ ಅತ್ಯಂತ ಉಪಯುಕ್ತವಾದ ಗ್ರಂಥವಾಗಿದೆ. ಒಟ್ಟು 187 ಪುಟಗಳು, ಬಹುವರ್ಣದ ಚಿತ್ರಗಳಿವೆ.  325 ರೂ. ಮುಖಬೆಲೆಯನ್ನು ಕೃತಿ ಹೊಂದಿದೆ.  ಆಶಯ ಆಕೃತಿ ಪಬ್ಲಿಕೇಶನ್ಸ್ ಮಂಗಳೂರು ಇವರು ಈ ಕೃತಿಯನ್ನು  ಹೊರತಂದಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.  ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ , ಮೇಯರ್ ದಿವಾಕರ್ ಪಾಂಡೇಶ್ವರ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತೆ ಸಂಧ್ಯಾ ಪೈ, ಹಿರಿಯ ಸಂಗೀತ ನಿರ್ದೇಶಕ ಗುರು ಕಿರಣ್ ಸೇರಿದಂತೆ ನಾನಾ ಗಣ್ಯರು  ಪಾಲ್ಗೊಂಡಿದ್ದರು.

ಕೃತಿಕರ್ತ ಬಿ. ರವೀಂದ್ರ ಶೆಟ್ಟಿ

ಬಿ. ರವೀಂದ್ರ ಶೆಟ್ಟಿಯವರು ಕಳೆದ 28 ವರ್ಷಗಳಿಂದ ಪತ್ರಕರ್ತರಾಗಿ ಮುದ್ರಣ ಹಾಗೂ ದ್ರಶ್ಯ ಮಾಧ್ಯಮಗಳಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ  ಚೀಫ್ ಕಾಪಿ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಗ್ರಾಹಕ ಜಾಗೃತಿ ಮುಂತಾದ ಕ್ಷೇತ್ರದಲ್ಲಿ ತನ್ನಲ್ಲಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ ಟ್ರಸ್ಟ್, ಸಮೀಕ್ಷಾ ಟ್ರಸ್ಟ್, ಸುವರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಹೀಗೆ ನಾನಾ ಸಂಘ ಸಂಸ್ಥೆಗಳಲ್ಲಿ  ನಾನಾ ಜವಾಬ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಕರಾಗಿಯೂ ನೂರಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ.

ಇತ್ತೀಚಿನ ಸುದ್ದಿ

ಜಾಹೀರಾತು