ಇತ್ತೀಚಿನ ಸುದ್ದಿ
ಮುಕ್ಕ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಐಸಾಪ್ ತಾಂತ್ರಿಕ ವಿಚಾರ ಸಂಕಿರಣ
October 19, 2020, 3:58 PM

ಮಂಗಳೂರು(reporterkarnatakanews): ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಐಸಾಪ್ (ಇಂಫಾರ್ಮೇಷನ್ ಸರ್ಚ್ ಅನಾಲಿಸಿಸ್ ಆಂಡ್ ಪ್ರೆಸೆಂಟೇಷನ್) ಕಾರ್ಯಕ್ರಮವನ್ನು ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ಮಣ್ಣಿನ ಶ್ರೀ ಲಕ್ಷ್ಮಿ ಜನಾರ್ಧನ ಇಂಟರ್ನ್ಯಾಶನಲ್ ಸ್ಕೂಲಿನ ಪ್ರಾಂಶುಪಾಲರಾದ ಪ್ರೊ. ಭುಜಂಗ ಪಿ. ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಸಂಚಾಲಕರಾದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರೂ ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಳೆದ 13 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿರುವ ಐಸಾಪ್ ವಿಚಾರ ಸಂಕಿರಣದಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ವಿಷಯಗಳ ಕುರಿತು ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಉದ್ಘಾಟನಾ ಭಾಷಣ ಮಾಡಿದ ಪ್ರೊ. ಭುಜಂಗ ಪಿ. ಶೆಟ್ಟಿ ಮಾತನಾಡಿ, ಇಂದಿನ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಮತ್ತು ಕೌಶಲ್ಯವು ಅತಿ ಮುಖ್ಯ. ದೇಶದ ಶಿಕ್ಷಣ ಪದ್ದತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಇತ್ತೀಚಿಗೆ ಕೇಂದ್ರ ಸರಕಾರವು ಜಾರಿಗೊಳಿಸಿದ ರಾಷ್ಟೀಯ ಶಿಕ್ಷಣ ನೀತಿಯು ಬಹಳ ಮಹತ್ತರವಾದದ್ದು. ಜ್ಞಾನ-ವಿಜ್ಞಾನ-ಕೌಶಲ್ಯ ಹಾಗೂ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ ಹಲವು ಅಂಶಗಳನ್ನು ಮುಕ್ಕ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯು ಕಳೆದ 13 ವರ್ಷಗಳಿಂದ ಅಳವಡಿಸಿಕೊಂಡು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವನ್ನು ಮಾತ್ರ ನೀಡಿದರೆ ಸಾಲದು. ಅದರ ಜೊತೆಗೆ, ಐಸಾಪ್ ಕಾರ್ಯಕ್ರಮದ ಮೂಲಕ, ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ವಿಧಾನಗಳನ್ನು ಹೇಳಿ ಕೊಟ್ಟು, ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಅಭಿರುಚಿಯನ್ನು ಜಾಗ್ರತಗೊಳಿಸಿದರೆ ಮಾತ್ರ ಉನ್ನತ ಶಿಕ್ಷಣ ವ್ಯಾಸಂಗವು ಪರಿಪೂರ್ಣತೆಯನ್ನು ಹೊಂದಿಕೊಳ್ಳುತ್ತದೆ ಎಂದು ಹೇಳಿದರು. ಅನುಭವದ ಮೂಲಕ ಕಲಿಕೆ, ನಿರಂತರ ಅಭ್ಯಾಸ, ಪ್ರಾಯೋಗಿಕ ಜ್ಞಾನ, ತರಬೇತಿ, ಆವಿಷ್ಕಾರ, ಸೃಜನಶೀಲ ಚಿಂತನೆ ಇವೇ ಮೊದಲಾದ ಅಂಶಗಳು ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಈ ಎಲ್ಲಾ ಅಂಶಗಳನ್ನು ಐಸಾಪ್ ಹೊಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇವಲ ಕ್ಯಾಂಪಸ್ ಸಂದರ್ಶನಕ್ಕೆ ಮಾತ್ರ ತಯಾರಿ ಮಾಡದೇ, ಅದರ ಬದಲಿಗೆ, ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿ ರೂಪುಗೊಳಿಸುವತ್ತ ಕಾರ್ಯನಿರ್ವಹಿಸಬೇಕಿದೆ. ಜ್ಞಾನದ ಹಸಿವು ಸದಾ ಇರಲಿ. ಐಸಾಪ್ ಕಾರ್ಯಕ್ರಮದ ಮೂಲಕ ವಿಮರ್ಶನಾತ್ಮಕ ಚಿಂತನೆ, ಸೃಜನಶೀಲತೆ, ಮತ್ತು ವಿಚಾರ ಮಂಥನ ಜಾಗೃತವಾಗಲಿ ಎಂದು ಪ್ರೊ. ಭುಜಂಗ ಶೆಟ್ಟಿಯವರು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಥಾಮಸ್ ಪಿಂಟೋ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ದ್ವಿತೀಯ ವರ್ಷದಲ್ಲಿ ವಿಷಯಗಳನ್ನು ವಿಶ್ಲೇಷಿಸಿ, ಸಂಬಂಧಪಟ್ಟ ಮಾಹಿತಿಗಳನ್ನು ಕ್ರೋಢೀಕರಿಸುವ ಕಲೆಯನ್ನು ಅರಿತುಕೊಂಡರೆ, ಮುಂದಿನ ವಿದ್ಯಾಭ್ಯಾಸವು ಸುಲಭವಾಗುತ್ತದೆ. ಆ ಮೂಲಕ, ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳನ್ನು ಕಾಣಲು ಸಾಧ್ಯ ಎಂದು ಹೇಳಿದರು. ಪ್ರಸ್ತುತ, ಇಂಗ್ಲೆಂಡ್ ಮತ್ತು ಜರ್ಮನಿ ದೇಶಗಳು ಉತ್ತಮ ಗುಣಮಟ್ಟದ ಅತ್ಯಂತ ಹೆಚ್ಚಿನ ಸಂಖ್ಯೆಯ ಸಂಶೋಧನಾತ್ಮಕ ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಭವಿಷ್ಯದಲ್ಲಿ, ರಾಷ್ಟೀಯ ಶಿಕ್ಷಣ ನೀತಿಯು ನಮ್ಮ ದೇಶದಲ್ಲಿಯೂ ಸಹ ಆವಿಷ್ಕಾರ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸಿ, ಆ ಮೂಲಕ ದೇಶದ ಜಿಡಿಪಿ ಹಾಗೂ ಆರ್ಥಿಕತೆಯನ್ನು ಮತ್ತಷ್ಟು ಸಧೃಡಗೊಳಿಸಲಿದೆ. ನಮ್ಮ ಸಂಸ್ಥೆಯಲ್ಲಿ ವಿಮರ್ಶನಾತ್ಮಕ ಚಿಂತನೆ, ಸೃಜನಶೀಲತೆ, ಸಂವಹನ ಕೌಶಲ್ಯತೆ, ಸಂಶೋಧನೆ, ಸಂಪೂರ್ಣ ಶೈಕ್ಷಣಿಕ ಗುಣಮಟ್ಟ ನಿರ್ವಹಣೆ, ಇವೇ ಮೊದಲಾದ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ದ್ವಿತೀಯ ವರ್ಷದ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಎಸ್. ಮಧುರಾ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲ್ಪಡುವ ಅತಿ ಉಪಯೋಗ ಉಪಕರಣವಾದ “ಪಿಲ್ ಕಾಮೆರಾ” ತಂತ್ರಜ್ಞಾನದ ಕುರಿತು ವಿಚಾರ ಸಂಕಿರಣವನ್ನು ಮಂಡಿಸಿದರು. ಮಾಲತಿ ಪ್ರಾರ್ಥನೆಗೈದರು.
ಪ್ರೊ. ಓಂ ಪ್ರಕಾಶ್ ಭಟ್ ಸ್ವಾಗತಿಸಿದರು. ಪ್ರೊ. ಪ್ರೀತಿ ಸಾಲಿಯಾನ್ ಬಂಧಿಸಿದರು.
ಪ್ರೊ. ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಐಸಾಪ್ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ವರ್ಷದ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವರ್ಚುವಲ್ ತಂತ್ರಜ್ಞಾನದ ಮೂಲಕ ವಿವಿಧ ವಿಭಾಗಗಳಲ್ಲಿ ತಾಂತ್ರಿಕ ವಿಷಯಗಳನ್ನು ಮಂಡಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪ್ರಕಾಶ್ ಬಿ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಕಾಲೇಜಿನ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವರ್ಚುವಲ್ ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.