ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯೂ ಇಲ್ಲ, ಸಚಿವ ಸಂಪುಟ ವಿಸ್ತರಣೆಯೂ ಇಲ್ಲ !
November 30, 2020, 5:57 PM

ಬೆಂಗಳೂರು(reporter Karnataka news): ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆಗಾಗ ಕೇಳಿ ಬರುತ್ತಿರುವ ಒಂದೇ ಮಾತು ಅಂದ್ರೆ ‘ಮುಖ್ಯಮಂತ್ರಿ ಚೇಂಜ್ ಆಗುತ್ತಾರೆ’ ಎನ್ನುವುದು. ಇಂತಹ ಪ್ರಯತ್ನ ಯಡಿಯೂರಪ್ಪ ವಿರೋಧಿ ಬಣದಿಂದ ಆಗಾಗ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ಕರ್ನಾಟಕದ ಮುಖ್ಯಮಂತ್ರಿ ಬದಲಾಯಿಸುವ ದುಸ್ಸಾಹಸಕ್ಕೆ ಕೈ ಹಾಕಿತ್ತೇ ಎನ್ನುವುದು ಎಲ್ಲೆಡೆ ಕೇಳುವ ಪ್ರಮುಖವಾದ ಪ್ರಶ್ನೆ.
ದೇಶದ ಉದ್ದಗಲಕ್ಕೂ ಬಿಜೆಪಿ ಹೈಕಮಾಂಡ್ ಎಷ್ಟೇ ಪ್ರಾಬಲ್ಯ ಹೊಂದಿದರೂ ಕರ್ನಾಟಕದ ಮಟ್ಟಿಗೆ ಮುಖ್ಯಮಂತ್ರಿ ಬದಲಾಯಿಸುವುದು ಬಟ್ಟೆ ಬದಲಾಯಿಸಿದಷ್ಟು ಸುಲಭವಲ್ಲ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದರು. ಈಗಲೂ ಅವರು ಮತ್ತು ಅವರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಆದರೆ, ಅದೇನಿದ್ದರೂ ರಾಜ್ಯದ ಮಟ್ಟಿಗೆ ಬಿಜೆಪಿ ಹಡಗಿಗೆ ಅವರೇ ಕ್ಯಾಪ್ಟನ್. ರಾಜ್ಯದಲ್ಲಿ ಬಿಜೆಪಿ ಅಂದ್ರೆ ಯಡಿಯೂರಪ್ಪ ಹಾಗೆ ಯಡಿಯೂರಪ್ಪ ಅಂದ್ರೆ ಬಿಜೆಪಿ ಎನ್ನುವ ವಾತಾವರಣವಿದೆ. ಇದಲ್ಲದೆ ಯಡಿಯೂರಪ್ಪ ಅವರು ಕೇವಲ ಭಾಷಣ ಮಾಡಿ ರಾಜ್ಯದ ನಾಯಕರಾದವರಲ್ಲ. 80ರ ದಶಕದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಟಾರ್ಚ್ ಹಾಕಿ ಹುಡುಕುವ ಪರಿಸ್ಥಿತಿ ಇದ್ದಾಗ ಇದೇ ಯಡಿಯೂರಪ್ಪ ಅವರು ಸೈಕಲ್ ಯಾತ್ರೆ ನಡೆಸಿ, ರೈತರನ್ನು ಸಂಘಟಿಸಿ ಪಕ್ಷವನ್ನು ಕಟ್ಟಿದ್ದಾರೆ. ಅದಲ್ಲದೆ ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತ ಬೆಂಬಲ ಯಡಿಯೂರಪ್ಪ ಅವರಿಗಿದೆಯೇ ಹೊರತು ಬಿಜೆಪಿಗಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗ ಇದು ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ವರಿಷ್ಠರು ಮುಂದಾಗಲಾರರು ಎನ್ನುವುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.