ಇತ್ತೀಚಿನ ಸುದ್ದಿ
ಮಂಗಳೂರು – ಕೊಚ್ಚಿ ನಡುವೆ ನೈಸರ್ಗಿಕ ಅನಿಲ ಕೊಳವೆ ಮಾರ್ಗ ನಾಳೆ ಪ್ರಧಾನಿ ದೇಶಕ್ಕೆ ಸಮರ್ಪಣೆ
January 4, 2021, 9:50 PM

ಮಂಗಳೂರು(reporterkarnataka news):
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕರ್ನಾಟಕದ ಮಂಗಳೂರು – ಕೇರಳದ ಕೊಚ್ಚಿ ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಜನವರಿ 5ರಂದು ಬೆಳಗ್ಗೆ 11 ಗಂಟೆಗೆ ದೇಶಕ್ಕೆ ಸಮರ್ಪಿಸಲಿದ್ದಾರೆ.
ಈ ಕಾರ್ಯಕ್ರಮ ‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ ರಚನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರೊಂದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಉಪಸ್ಥಿತರಿರುತ್ತಾರೆ.
ಕೊಳವೆ ಮಾರ್ಗ ಕುರಿತು: 450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿಎಐ.ಎಲ್ (ಇಂಡಿಯಾ) ಲಿ., ನಿರ್ಮಿಸಿದೆ. ಇದು ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ (ಎನ್.ಎನ್.ಜಿ) ಮರುಹೊಂದಾಣಿಕೆ ಟರ್ಮಿನಲ್ ನಿಂದ ಎರ್ನಾಕುಲಂ, ತ್ರಿಸ್ಸೂರ್, ಪಾಲಕ್ಕಾಡ್, ಮಲ್ಲಪುರಂ, ಕೋಳಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಹಾದೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 3000 ಕೋಟಿ ರೂ.ಗಳಾಗಿದ್ದು, ಅದರ ನಿರ್ಮಾಣವು 12 ಲಕ್ಷ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು. ಕೊಳವೆ ಮಾರ್ಗ ಅಳವಡಿಕೆಯು ಎಂಜಿನಿಯರಿಂಗ್ ಸವಾಲಾಗಿತ್ತು, ಏಕೆಂದರೆ ಕೊಳವೆ ಮಾರ್ಗವು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು. ಇದನ್ನು ಅಡ್ಡಡ್ಡ ಕೊರೆಯುವ ವಿಧಾನದ ವಿಶೇಷ ತಂತ್ರಜ್ಞಾನದ ಮೂಲಕ ಮಾಡಲಾಯಿತು.
ಈ ಕೊಳವೆ ಮಾರ್ಗ ಪರಿಸರ ಸ್ನೇಹಿ ಮತ್ತು ಕೈಗೆಟಕುವ ದರದ ಇಂಧನವನ್ನು ಕೊಳವೆ ಮಾರ್ಗದ ನೈಸರ್ಗಿಕ ಅನಿಲ (ಪಿ.ಎನ್.ಜಿ.)ರೂಪದಲ್ಲಿ ಮನೆಗಳಿಗೆ ಪೂರೈಸಲಿದೆ ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿ.ಎನ್.ಜಿ.)ಯನ್ನು ಸಾರಿಗೆ ವಲಯಕ್ಕೆ ಸರಬರಾಜು ಮಾಡಲಿದೆ. ಇದು ನೈಸರ್ಗಿಕ ಅನಿಲವನ್ನು ಜಿಲ್ಲೆಯಾದ್ಯಂತದ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳಿಗೆ ಕೊಳವೆ ಮಾರ್ಗದಲ್ಲಿ ಪೂರೈಸಲಿದೆ. ಶುದ್ಧ ಇಂಧನದ ಬಳಕೆಯು ವಾಯು ಮಾಲಿನ್ಯವನ್ನು ನಿಗ್ರಹಿಸಿ, ವಾಯು ಗುಣಮಟ್ಟವನ್ನು ಸುಧಾರಿಸುತ್ತದೆ.