ಇತ್ತೀಚಿನ ಸುದ್ದಿ
ಮಂಗಳೂರು ವಿ ವಿ ಕಾಲೇಜಿನಲ್ಲಿ ಎನ್ ಎಸ್ ಎಸ್ ವತಿಯಿಂದ ಯುವ ಜನೋತ್ಸವ ಕಾರ್ಯಕ್ರಮ
January 13, 2021, 4:40 PM

ಮಂಗಳೂರು(reporterkarnataka):
ಮಂಗಳೂರು ವಿಶ್ವವಿದ್ಯಾಲಯ ಕಾಲೇಜ್ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317-ಡಿ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ 2021ನ್ನು ವಿಶ್ವವಿದ್ಯಾಲಯ ಕಾಲೇಜ್ನ ಶಿವರಾಮ ಕಾರಂತ ಹಾಲ್ನಲ್ಲಿ ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಜಯ ಕರ್ನಾಟಕ ಮುಖ್ಯ ಉಪ ಸಂಪಾದಕ ರವೀಂದ್ರ ಶೆಟ್ಟಿ ಮಾತನಾಡಿ, ಸೈನಿಕರು, ಶಿಕ್ಷಕರು, ರೈತರು ಹಾಗೂ ಕಾರ್ಮಿಕ ವರ್ಗವನ್ನು ಗೌರವಿಸಲು ಕಲಿಯಬೇಕು ಇದು ತಾಯಿನೆಲಕ್ಕೆ ನಾವು ಗೌರವ ಸಲ್ಲಿಸಿದ ಹಾಗೆ ಎಂದರು.
ಶತಮಾನಗಳ ಹಿಂದೆ ಬದುಕಿದ್ದ ನಮ್ಮ ಹಿರಿಯರ ಹೆಸರುಗಳೇ ಗೊತ್ತಿಲ್ಲ ಆದರೆ ಅದೇ ಸಂದರ್ಭದಲ್ಲಿ ಇದ್ದ ಅನೇಕ ಮಹಾನೀಯರ ಹೆಸರು ನಮಗೆ ಗೊತ್ತಿದೆ ಯಾಕೆಂದರೆ ಅವರು ಸಮಾಜಕ್ಕಾಗಿ ಮಾಡಿದ ಕಾರ್ಯಗಳು ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಅದೇ ರೀತಿ ನಾವು ನಮ್ಮ ಹೆಸರನ್ನು ಉಳಿಸಿ ಹೋಗಬೇಕು. ಸಮಾಜಕ್ಕಾಗಿ ಏನಾದರು ಮಾಡಬೇಕು ಉಸಿರು ಅಳಿದರು ಹೆಸರು ಉಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂತ್ ಕ್ಯಾಂಪ್ ಆಂಡ್ ಎಕ್ಸ್ಚೇಂಜ್ನ ಜಿಲ್ಲಾ ಸಂಚಾಲಕ ವಿಜಯ ವಿಷ್ಣು ಮಯ್ಯ ಮಾತನಾಡಿ, ಎಲ್ಲರೂ ಹುಟ್ಟುವಾಗ ಸಾಮಾನ್ಯ ಮನುಜನಾಗಿಯೇ ಹುಟ್ಟುತ್ತಾರೆ ಆದರೆ ನಮ್ಮ ವ್ಯಕ್ತಿತ್ವ ನಮ್ಮನ್ನು ಬೆಳೆಸುತ್ತದೆ. ನಾವು ಬಹಳಷ್ಟು ಮಂದಿಯನ್ನು ನಾಯಕರಾಗಿ ಆಯ್ಕೆ ಮಾಡುತ್ತೇವೆ ಆದರೆ ನಮ್ಮ ನಾಯಕ ನಾವೇ ಎನ್ನುವುದು ಮರೆಯುತ್ತೇವೆ. ನಮ್ಮ ಗುರಿಯತ್ತ ನಾವು ನಡೆಯಬೇಕು ಬೇರೆಯವರ ಮಾತುಗಳನ್ನು ನಾವು ಕೇಳಬಾರದು. ಹೇಳುವವರು ಸೋತಾಗ ಹೀಯಾಳಿಸುತ್ತಾರೆ ಗೆದ್ದಾಗ ಮೂಕರಾಗುತ್ತಾರೆ ಎಂದರು.
ಲಯನ್ಸ್ ಜಿಲ್ಲೆಯ ಪ್ರಥಮ ಉಪ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅನ್ವೇಶನಂ ಕೇಂದ್ರದ ಸ್ಥಾಪಕರಾದ ಸಚಿತ ನಂದಗೋಪಾಲ್ ಅವರಿಂದ ಕಾರ್ಯಗಾರ ನಡೆಯಿತು.
ಕಾರ್ಯಕ್ರಮ ಆಯೋಜಕರಾದ ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಸ್ವಾಗತಿಸಿದರು. ಡಾ.ಗಾಯತ್ರಿ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.