ಇತ್ತೀಚಿನ ಸುದ್ದಿ
ಭಾರಿ ವಿವಾದಕ್ಕೆ ಕಾರಣವಾಗಿದ್ದ ರಸ್ತೆ ನಾಮಕರಣಕ್ಕೆ ರಾಜ್ಯ ಸರಕಾರ ಒಪ್ಪಿಗೆ
September 22, 2020, 8:27 PM

ಮಂಗಳೂರು(reporterkarnataka news):
ಭಾರಿ ವಿವಾದಕ್ಕೆ ಕಾರಣವಾಗಿದ್ದ, ಕರಾವಳಿಯ ಎರಡು ಪ್ರಬಲ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಸಿದ್ದ ನಗರದ ಲೈಟ್ ಹೌಸ್ ಹಿಲ್ ರಸ್ತೆ ನಾಮಕರಣ ವಿಷಯಕ್ಕೆ ಮರುಜೀವ ಬಂದಿದೆ. ಈ ರಸ್ತೆಗೆ ಇದೀಗ ಇತಿಹಾಸ ಸೇರಿದ ವಿಜಯ ಬ್ಯಾಂಕ್ ನ ಸ್ಥಾಪಕರಾದ ಸುಂದರ ರಾಮ ಶೆಟ್ಟರ ನಾಮಕರಣ ಮಾಡಲು ರಾಜ್ಯ ನಗರಾಭಿವೃದ್ಧಿ ಸಚಿವಾಲಯ ಒಪ್ಪಿಗೆ ನೀಡಿದೆ.
ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಲೈಟ್ ಹೌಸ್ ಹಿಲ್ ಬಳಿಯ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರು ನಾಮಕರಣ ಮಾಡಲು 2017ರ ಮೇ 24ರಂದು ಆಗಿನ ರಾಜ್ಯ ಸರಕಾರ ಆದೇಶ ಮಾಡಿತ್ತು. ಆದರೆ, ಕೊನೆಕ್ಷಣದಲ್ಲಿ ಅಂದಿನ ಶಾಸಕರಾಗಿದ್ದ ಜೆ.ಆರ್. ಲೋಬೊ ತಡೆಯಾಜ್ಞೆ ತಂದಿದ್ದರು. ನಾಮಕರಣದ ಪರ- ವಿರೋಧ ಭಾರಿ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ – ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟ ನಡೆದಿತ್ತು. ಬಳಿಕ ನಾಮಕರಣ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಬಂದರೆ ಒಂದೇ ತಿಂಗಳಲ್ಲಿ ರಸ್ತೆ ನಾಮಕರಣ ಮಾಡಿಸುವುದಾಗಿ ಅಂದಿನ ಕೆಲವು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
ಆನಂತರ ಹೈಕೋರ್ಟಿನಲ್ಲಿ ವಾದ – ವಿವಾದ ನಡೆದಿದ್ದು ಮಹಾನಗರ ಪಾಲಿಕೆ ಕಮಿಷನರ್ ಅವರ ಅಭಿಪ್ರಾಯವನ್ನೂ ಕೇಳಲಾಗಿತ್ತು. ಎರಡೂ ಕಡೆಯ ವಾದ ಆಲಿಸಿದ ರಾಜ್ಯ ಹೈಕೋರ್ಟ್, 2019ರ ಏಪ್ರಿಲ್ 11 ರಂದು ಈ ಬಗ್ಗೆ ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.
ಇದೀಗ ರಾಜ್ಯದ ಬಿಜೆಪಿ ಸರಕಾರ ಹಳೆಯ ಆದೇಶವನ್ನು ಊರ್ಜಿತಗೊಳಿಸಿ ನಗರಾಭಿವೃದ್ಧಿ ಸಚಿವಾಲಯದ ಮೂಲದ ಆದೇಶ ಮಾಡಿಸಿದೆ.