ಇತ್ತೀಚಿನ ಸುದ್ದಿ
ಕುಸಿದು ಬಿದ್ದ ಸಾಲು ಮರದ ತಿಮ್ಮಕ್ಕ ಬೆಂಗಳೂರಿನ ಆಸ್ಪತ್ರೆಗೆ ದಾಖಲು..!!
December 8, 2020, 3:27 PM

ಕರ್ನಾಟಕದ ಹೆಮ್ಮೆ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದೆ.
ಬೇಲೂರಿನ ತಮ್ಮ ಮನೆಯಲ್ಲಿ ಭಾನುವಾರ ಸಂಜೆ ಕುಸಿದು ಬಿದ್ದ ತಿಮ್ಮಕ್ಕ ಅವರ ಸೊಂಟದ ಮೂಳೆ ಮುರಿದು ಹೋಗಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ತಿಮ್ಮಕ್ಕ ಅವರ ಸೊಂಟಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದ್ದು, ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ಕರೆತರಲಾಗಿದೆ. ಬುಧವಾರ ಅಥವಾ ಗುರುವಾರ ಅವರ ಸೊಂಟದ ಆಪರೇಷನ್ ನಡೆಸುವ ಸಾಧ್ಯತೆ ಇದೆ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಮಾಹಿತಿ ನೀಡಿದ್ದಾರೆ.
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಕಳೆದ ಮೇ ತಿಂಗಳಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಹೊಟ್ಟೆನೋವು, ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದ ತಿಮ್ಮಕ್ಕ ಅವರನ್ನು ಹಾಸನದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.