ಇತ್ತೀಚಿನ ಸುದ್ದಿ
ಮುಂಗಾರು ಬೆಳೆ ಸಮೀಕ್ಷೆ ಆರಂಭ: ಬೆಳೆ ಮಾಹಿತಿ ನೀಡಲು ಕೃಷಿಕರಿಗೆ ಆಗಸ್ಟ್ 24ರ ವರೆಗೆ ಅವಕಾಶ
August 12, 2020, 11:47 AM

ಮಂಗಳೂರು(reporterkarnataka news): 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆಗಸ್ಟ್ 10 ರಿಂದ ಜಿಲ್ಲೆಯಾದ್ಯಂತ ಆರಂಭವಾಗುತ್ತಿದೆ. ಎಲ್ಲ
ಹಂಗಾಮುಗಳಲ್ಲಿ ರೈತರೇ ತಮ್ಮ ಜಮೀನುಗಳಲ್ಲಿನ ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಿ ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ಅಪ್ಲೋಡ್ ಮಾಡಲು ಅಗಸ್ಟ್ 10 ರಿಂದ 24ರ ವರೆಗೆ ಸರಕಾರ ಅವಕಾಶ ಕಲ್ಪಿಸಿದೆ.
ರೈತರು ಸ್ವತಂತ್ರವಾಗಿ ಅಪ್ಲೋಡ್ ಮಾಡಲು ಸಾಧ್ಯವಾಗದಿದ್ದಲ್ಲಿ ಖಾಸಗಿ ನಿವಾಸಿಗಳ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದುಕೊಳ್ಳಬಹುದು. ಈ ಬೆಳೆ ಮಾಹಿತಿ ಆಧಾರದ ಮೇಲೆ ಕನಿಷ್ಠ ಬೆಂಬಲ ನಿಗದಿ, ಬೆಳೆ ಪರಿಹಾರ – ಬೆಳೆ ವಿಮಾ ಯೋಜನೆ, ಎನ್ ಡಿಆರ್ ಎಫ್., ಎಸ್.ಡಿ.ಆರ್.ಎಫ್. ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವುದು. ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ಇತ್ಯಾದಿ ದಾಖಲಾತಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ. ಬೆಳೆ ವಿವರಗಳನ್ನು ಅಪ್ಲೋಡ್ ಮಾಡದಿದ್ದಲ್ಲಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.