ಇತ್ತೀಚಿನ ಸುದ್ದಿ
‘ಕರಿಯಜ್ಜೆ’ ಹೆಸರಿನಲಿ ಸೋಮವಾರ ಬಿಡುಗಡೆಯಾಗಲಿದೆ ಕೊರಗಜ್ಜ ಸ್ತುತಿ ಮೂಲಕ ತುಳುನಾಡ ಮನಗೆದ್ದ ಕಾರ್ಕಳದ ಕಾರ್ತಿಕ್ನ ಮೊದಲ ಹಾಡು !!!
ಇದೇ ಅಲ್ವ ಸೋಶಿಯಲ್ ಮೀಡಿಯ ಪವರ್..!!?
November 6, 2020, 8:35 AM

ಗಣೇಶ್ ಅದ್ಯಪಾಡಿ, ಮಂಗಳೂರು
ganesh@reporterkarnataka.com
ಉಡುಪಿ ಜಿಲ್ಲೆಯ ಕಾರ್ಕಳದೊಳಗಿನ ಮೂಜೂರು ಎನ್ನುವ ಸಣ್ಣ ಗ್ರಾಮದೊಳಗಿನ ಪುಟ್ಟ ಮನೆಯ ಏಳು ವರ್ಷದ ಪೋರ ಕಳೆದ ಎರಡು ಮೂರು ದಿವಸದ ಹಿಂದೆ ಇಡೀ ತುಳುನಾಡಿಗೆ ಪರಿಚಿತನಾಗುತ್ತಾನೆ ಪ್ರತಿಯೊಬ್ಬರ ಮನದೊಳಗೆ ನೆಲೆಯಾಗುತ್ತಾನೆ. ಅದಕ್ಕೆ ಕಾರಣವಾಗುವುದು ಅವನ ಆ ನಿಷ್ಕಲ್ಮಶ ಮನದ ಮುಗ್ಧ ಭಾವದೊಂದಿಗೆ ಅಮೋಘವಾಗಿ ಹಾಡಿದ ಕೊರಗಜ್ಜನ ಸ್ತುತಿ ಹಾಗೂ ಮಂತ್ರದೇವತೆಯ ಗೀತೆ.

ಕಾರ್ತಿಕ್ ಹಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿರುವಂತೆ ಎಲ್ಲರೂ ತಮ್ಮ ವಾಲ್ಗಳಲ್ಲಿ ಸ್ಟೇಟಸ್ಗಳಲ್ಲಿ ಶೇರ್ ಮಾಡುತ್ತಾರೆ. ಕರವಾಳಿಯಾದ್ಯಂತ ‘ಕಡಲ ಪುಡೆತ ಉಡಲ ಗೇನ’ ಹಾಗೂ ‘ಕಲ್ಜಿಗದ ಕಾಳಿ’ ಹಾಡಿನ ಮೂಲಕ ಅವನ ಧ್ವನಿ ಸಂಚಲನ ಮೂಡಿಸಿತ್ತು.
ಇದೀಗ ಕಾರ್ತಿಕ್ನ ಮೊದಲ ಬಾರಿಗೆ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆದ ಹಾಡೊಂದು ನ.9ರಂದು ಸೋಮವಾರ ಜಾರಿಗೆಕಟ್ಡೆ ಕೊರಗಜ್ಜನ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಹಾಡನ್ನು ಬರೆದಿದ್ದು ಯಾರು.? ರೆಕಾರ್ಡಿಂಗ್ ನಡೆದಿದ್ದು ಎಲ್ಲಿ .? ಎಲ್ಲಾ ಮಾಹಿತಿಗಳು ಇಲ್ಲಿದೆ ಸಂಪೂರ್ಣ ಓದಿ.
ತುಳುನಾಡಿನ ಯುವ ಸಾಹಿತಿಯಾದ ಜಿ.ಎಸ್.ಗುರುಪುರ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಜಿ.ಎಸ್.ಅವರು ಹೇಳುವಂತೆ, ಡಮರುಗ ತಂಡದ ಪ್ರಸಾದ್ ಕೊಳಂಬೆ ವಿಡಿಯೋವನ್ನು ಕಳಿಸಿದಾಗ ಅದನ್ನು ನೋಡಿ ಗಾಯನ ಕೇಳಿದ ಸಂದರ್ಭ ರೋಮಾಂಚನಗೊಂಡಂತಾಯಿತು ಹಾಗೂ ಅವನನ್ನು ಹಾಡಿಸಬೇಕು ಎನ್ನುವ ಮನಸ್ಸು ಮೂಡಿತು. ಪ್ರಸಾದ್ ಅವರು ಅಲೋಕಿತ್ ಶೆಟ್ಟಿ ಅವರ ಮೂಲಕ ಸೋಶಿಯಲ್ ಮೀಡಿಯಾ ನೆರವಿನಿಂದ ಹುಡುಗನ ಮನೆಯವರ ನಂಬರ್ ಪಡೆದುಕೊಂಡರು. ಅದೇ ರಾತ್ರಿಯಲ್ಲಿ ಟ್ಯೂನ್ ಹಿಡಿದು ಸಾಹಿತ್ಯವೂ ಬರೆದಾಯಿತು. ಬಳಿಕ ಅವನ ಮನೆಯವರನ್ನು ಸಂಪರ್ಕಿಸಿ ವಿಳಾಸ ಪಡೆದು ಮನೆಗೆ ಹೋಗಿ ಮಾತಾಡಿಸಿ ವಿಚಾರ ತಿಳಿಸಿದೆ.

ಸುಶಾಂತ್ ಅಮೀನ್ ಚಕ್ರತೀರ್ಥ ಹಾಗೂ ಚೇತನ್ ಕಲ್ಲಡ್ಕ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಅವನಿಗೂ ಸಹಾಯ ನೀಡುವುದಾಗಿ ಭರವಸೆ ನೀಡಿದರು ಮತ್ತೆ ಅವನ ಮನೆಗೆ ಹೋಗಿ ಗಾಯಕಿ ಚೈತ್ರ ಕಲ್ಲಡ್ಕ ಹಾಡಿನ ಸಾಹಿತ್ಯವನ್ನು ಹಾಡಿದಾಗ ಅದನ್ನು ಮನನ ಮಾಡಿಕೊಂಡ ಕಾರ್ತಿಕ್ ಹಾಡಲು ಸಿದ್ಧನಾದ.

ಮೊದಲು ಅವನನ್ನು ಮಂತ್ರದೇವತೆಯ ಆದಿಯಾದ ಸೂಂತ್ಲಾಡಿಗೆ ಕರೆದುಕೊಂಡು ಹೋಗಿ ಹಾಡಿಸಲಾಯಿತು.

ಸಂಗೀತ ಕಲಿಯದಿದ್ದರೂ, ಓದಲು ಬಾರದಿದ್ದರೂ ಅಮೋಘವಾಗಿ ಹಾಡನ್ನು ಹಾಡಿದ್ದಾನೆ. ಲಯ ತಾಳಕ್ಕಿಂತಲೂ ಅವನ ಸರಳ ಮುಗ್ಧ ಹಾಗೂ ಅಪಾರ ಭಕ್ತಿ ಭಾವ ಹಾಡಿಗೆ ಜೀವ ತುಂಬುತ್ತಿದೆ ಎನ್ನುತ್ತಾರೆ.

ಮಂಗಳವಾರ ವೇಲೆನ್ಸಿಯಾದ ಸೌಂಡ್ ವೇವ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ನಡೆದಿದ್ದು, ಪ್ರಥಮ ಬಾರಿಗೆ ರೆಕಾರ್ಡಿಂಗ್ ಸ್ಟುಡಿಯೋ ನೋಡೀದ್ದ ಕಾರ್ತಿಕ್ ಹೆದರಿದ್ದ ಹೇಗೋ ಸಮಾಧಾನಿಸಿ ಹಾಡನ್ನು ಹಾಡಿಸಿದ್ದು, ಹಾಡಿನಲ್ಲಿ ಬೀಡ ಚಕ್ಕುಲಿ ನಿಕ್ಕ್ ಎನ್ನುವ ಸಾಲೊಂದು ಇತ್ತು, ಅದನ್ನು ಹಾಡುವಾಗ ಅವನೇ ಅಗೆಲ್ ಎಂದು ಕೇಳುತ್ತಾನೆ. ಇದು ಅವನೊಳಗಿನ ಕೊರಗಜ್ಜನ ಭಕ್ತಿಯನ್ನು ತಿಳಿಸುತ್ತದೆ ಹಾಗೂ ಅವನಿಗಾಗಿ ಸಾಹಿತ್ಯವನ್ನು ಬದಲಿಸಲಾಯಿತು. ಈ ‘ಕರಿಯಜ್ಜೆ‘ ಎನ್ನುವ ಹೆಸರಿನ ಹಾಡಿನ ಪೋಸ್ಟರ್ ಗುರುವಾರ ಸಂಜೆ ಬಿಡುಗಡೆಗೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಐದು ವರ್ಷ ತುಂಬುವವರೆಗೆ ನಡೆದಾಡುತ್ತಿರಲಿಲ್ಲ ಕಾರ್ತಿಕ್..!

ಕಾರ್ಕಳ ತಾಲೂಕಿನ ಅಜೆಕಾರು ಹೆಬ್ರಿ ನಡುವಿನ ಮೂಜೂರು ಸಮೀಪದ ನಿವಾಸಿ ಪೂವಪ್ಪ ಲೋಲಾಕ್ಷಿ ದಂಪತಿಗಳ ಮೂವರು ಮಕ್ಕಳಲ್ಲಿ ಕೊನೆಯವನಾದ ಕಾರ್ತಿಕ್ ಐದು ವರ್ಷದವರೆಗೆ ಕಾಲು ಊರಿ ನಡೆದಾಡುತ್ತಿರಲಿಲ್ಲ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಯತ್ನಿಸಿದರು ಫಲಪ್ರದವಾಗಲಿಲ್ಲ.
ಕೊನೆಗೆ ದೈವ ದೇವರುಗಳ ಮೊರೆ ಹೋಗಿಯೂ ಕಂಗಾಲಾಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಈತ, ನಡೆದಾಡಲು ಆರಂಭಿಸಿದ್ದು, ಕೊರಗಜ್ಜನ ಮೇಲೆ ಅಪಾರವಾದ ದೈವಭಕ್ತಿಯನ್ನು ಹೊಂದಿದ್ದಾನೆ. ಮೊಬೈಲಿನಲ್ಲಿ ಕೇಳುವ ಕೊರಗಜ್ಜನ ಹಾಡುಗಳನ್ನು ಬಾಯಿಪಾಠ ಮಾಡಿ ಸದಾ ಗುಣುಗುತ್ತಿರುತ್ತಾನಂತೆ.
ಹಾಡನ್ನು ತನ್ಮಯತೆಯಿಂದ, ಉಚ್ಚ ಸ್ಥಾಯಿಯಲ್ಲಿ ಹಾಡಲು ಪ್ರಯತ್ನಿಸುವ ಈತ ಯಾವುದೇ ರೀತಿಯ ಸಂಗೀತ ತರಬೇತಿ ಪಡೆದುಕೊಂಡಿಲ್ಲ. ಅಕ್ಕ ರಕ್ಷಿತಾ ಕೊಂಚ ಮಟ್ಟಿಗೆ ಹಾಡನ್ನು ತಿಳಿಸಿಕೊಡುವ ಪ್ರಯತ್ನ ಮಾಡಿತ್ತಾರೆ ಅಷ್ಟೆ. ತನ್ನ ದೈಹಿಕ ದುರ್ಬಲತೆಯಿಂದಾಗಿ ಇನ್ನೂ ಶಾಲೆಗೆ ಸೇರದ ಕಾರ್ತಿಕ್ ಓದೂ ಬಾರದೆ ಇದ್ದರು ಸ್ಪಷ್ಟವಾಗಿ ತನ್ಮಯನಾಗಿ ಹಾಡುವುದು ಮಾತ್ರ ಅಚ್ಚರಿ ಮೂಡಿಸಿದೆ. ಇನ್ನಷ್ಟು ಹೆಚ್ಚಿನ ಪ್ರಗತಿಯನ್ನು ತನ್ನ ಜೀವನದಲ್ಲಿ ಹಾಗೂ ಹಾಡಿನ ಮೂಲಕ ಜಗದಗಲ ಹೆಸರಾಗಲಿ ಎನ್ನುವುದು ತುಳುನಾಡಿಗರ ಹಾರೈಕೆಯಾಗಿದೆ.
Join our WhatsApp group
https://bit.ly/35uJT5s
Our YouTube Channel : https://bit.ly/3jPrFRb
Our Facebook page link:
https://bit.ly/3ekqPL1
Our Instagram id:
https://bit.ly/3kRgXef