ಇತ್ತೀಚಿನ ಸುದ್ದಿ
ದಿನೇಶ್ ಹಲ್ಲೆ ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಡಾ.ಭರತ್ ಶೆಟ್ಟಿ
October 29, 2020, 12:58 PM

ಫರಂಗಿಪೇಟೆ(reporterkarnataka news):
ಪುದು ಶಕ್ತಿಕೇಂದ್ರದ ಬಿಜೆಪಿ ಸೋಶಿಯಲ್ ಮೀಡಿಯಾ ಸಂಚಾಲಕ ಫರಂಗಿಪೇಟೆಯಲ್ಲಿ ಸ್ಟುಡಿಯೋ ಹೊಂದಿರುವ ದಿನೇಶ್ ಕೊಟ್ಟಿಂಜ ಅವರ ಸ್ಟುಡಿಯೊ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಶಾಸಕ ಡಾ. ವೈ. ಭರತ್ ಶೆಟ್ಟಿ ಸೂಚಿಸಿದ್ದಾರೆ.

ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಎಲ್ಲಾ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳೊಡನೆ ಮಾತನಾಡಿ ಈ ದುರ್ಘಟನೆಗೆ ಕಾರಣರಾದ ಹಲ್ಲೆಕೋರರನ್ನು ತಕ್ಷಣ ಬಂಧಿಸುವಂತೆ ಸೂಚಿಸಿದ್ದಾರೆ. ರಾಜ್ಯದ ಗೃಹಸಚಿವರಾದ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡಾ.ಭರತ್ ಶೆಟ್ಟಿಯವರು ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡಲು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡುಬಿದಿರೆ, ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್, ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಅನೇಕ ಕಾರ್ಯಕರ್ತರು ಭೇಟಿ ನೀಡಿದರು.