ಇತ್ತೀಚಿನ ಸುದ್ದಿ
ಕೋಲಾರದಲ್ಲಿ ಅವರೆ ಕಾಯಿ ಬೆಲೆ ಕುಸಿತ: ಮಾರುಕಟ್ಟೆ ತಲ್ಲಣ, ಬೆಳೆಗಾರರಿಗೆ ಭಾರಿ ನಷ್ಟ
December 21, 2020, 2:05 PM

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
info.reporterkarnataka@gmail.com
ಶ್ರೀನಿವಾಸಪುರದ ಎಂ. ಜಿ. ರಸ್ತೆಯಲ್ಲಿರುವ ಮಾರುಕಟ್ಟೆಗೆ ನಿಧಾನವಾಗಿ ಅವರೆ ಕಾಯಿ ಆವಕದ ಪ್ರಮಾಣ ಹೆಚ್ಚುತ್ತಿದೆ. ಆದರೆ, ಆವಕದ ಪ್ರಮಾಣ ಹೆಚ್ಚಿದಂತೆ ಬೆಲೆಯಲ್ಲಿ ಇಳಿಕೆ ಪ್ರಾರಂಭವಾಗಿದೆ.
ಇದು ಬೆಳೆಗಾರರಿಗೆ ತುಂಬಲಾಗದ ತುತ್ತಾಗಿ ಪರಿಣಮಿಸಿದೆ.
ತಾಲ್ಲೂಕಿನಲ್ಲಿ ಸಾಂಪ್ರದಾಯಿಕ ರಾಗಿ ಹೊಲಗಳು ಹಾಗೂ ಪ್ರತ್ಯೇಕವಾಗಿ ಅವರೆ ಕಾಯಿ ಬೆಳೆಯಲಾಗಿದೆ. ಈಗ ಮೊದಲ ಬಿತ್ತನೆಯ ಫಸಲು ಮಾರುಕಟ್ಟೆಗೆ ಬರುತ್ತಿದೆ. ಮಾರುಕಟ್ಟೆಯ ಪ್ರಾರಂಭದಲ್ಲಿ ಒಂದು ಕೆ.ಜಿ ಅವರೆ ಕಾಯಿ ₹50 ರಂತೆ ಮಾರಾಟವಾಗುತ್ತಿತ್ತು. ಇದರಿಂದ ರೈತರ ಮೊಗದಲ್ಲಿ ನಗೆ ಕಂಡುಬಂದಿತ್ತು. ಆದರೆ ದಿನ ಕಳೆದಂತೆ ಬೆಲೆ ಇಳಿಕೆ ಪ್ರಾರಂಭವಾಗಿದ್ದು, ಈಗ ಕೆ.ಜಿಯೊಂದು ₹40 ರಂತೆ 35 ಮಾರಾಟವಾಗುತ್ತಿದೆ.
‘ಅವರೆ ಕಾಯಿ ಆವಕ ಈಗಷ್ಟೇ ಪ್ರಾರಂಭವಾಗಿದೆ. ಹಾಗಾಗಿ ಹೊರಗಿನ ಮಾರುಕಟ್ಟೆಗಳಿಗೆ ಕಾಯಿ ಹೋಗುತ್ತಿಲ್ಲ. ಬೆಂಗಳೂರು, ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ವ್ಯಾಪಾರಿಗಳು ಬಂದಲ್ಲಿ ಕಾಯಿ ಬೆಲೆ ಸುಧಾರಿಸುವ ಭರವಸೆ ಇದೆ’ ಎಂಬುದು ವ್ಯಾಪಾರಿಗಳ ಅಭಿಪ್ರಾಯ.
ಆದರೆ ಇತ್ತೀಚೆಗೆ ಎಡೆಬಿಡದೆ ಸುರಿದ ಜಡಿಮಳೆಯಿಂದಾಗಿ ಅವರೆ ಗಿಡಕ್ಕೆ ಅಂಗಮಾರಿ ರೋಗ ಆವರಿಸಿದೆ. ಎಲೆ ಕಪ್ಪು ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತಿದೆ. ಎಲೆ ಕಳಚಿದ ಗಿಡ ಹೆಚ್ಚು ದಿನ ಉಳಿಯುವುದಿಲ್ಲ. ಫಸಲಿನ ಗುಣಮಟ್ಟವೂ ಕುಸಿಯುತ್ತದೆ. ಇದು ಬೆಲೆ ಇಳಿಕೆಗೆ ಕಾರಣವಾಗುತ್ತದೆ ಎಂಬ ಆತಂಕ ರೈತರದು.
ಹಿಂದೆ ರೈತರು ಹಿಸಿ ಕಾಯಿ ಮಾರಾಟ ಮಾಡುತ್ತಿರಲಿಲ್ಲ. ಕಾಯಿ ಒಣಗಿದ ಮೇಲೆ ಕಾಳು ಮಾಡಿ, ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು, ಉಳಿದ ಬೀಜವನ್ನು ಮಾರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಳಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಹಾಗಾಗಿ ಎಲ್ಲರು ಹಸಿ ಕಾಯಿ ಕಿತ್ತು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ಇದು ಆವಕ ಹೆಚ್ಚಳಕ್ಕೆ ಕಾರಣವಾಗಿದೆ. ರೈತರಿಂದ ಕಾಯಿ ಖರೀದಿಸಿದ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ.