ಇತ್ತೀಚಿನ ಸುದ್ದಿ
ಕೊಡವೂರಿನ ರಸ್ತೆಯೊಂದಕ್ಕೆ ತುಳು ಮಹಾಭಾರತೊ ಬರೆದ ಕವಿ ಅರುಣಾಬ್ಜನ ಹೆಸರು
December 9, 2020, 5:38 PM

ಉಡುಪಿ(Reporter Karnataka News)
ಜೈ ತುಳುನಾಡ್ ಸಂಘದ ವತಿಯಿಂದ ನಡೆಯುತ್ತಿರುವ ತುಳು ಲಿಪಿಯಲ್ಲಿ ಊರಿನ ಹೆಸರಿನ ನಾಮಫಲಕದ ಅಭಿಯಾನದ ಅಂಗವಾಗಿ ಪ್ರಾಚೀನ ತುಳು ಕವಿ ಅರುಣಾಬ್ಜ ಜನ್ಮಸ್ಥಳವಾದ ಕೊಡವೂರಿನಲ್ಲಿ ತುಳು ಲಿಪಿಯಲ್ಲಿ ಊರಿನ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಕೊಡವೂರು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ಸಹಯೋಗದೊಂದಿಗೆ ಇತ್ತೀಚೆಗೆ ನಡೆಯಿತು.
ಕೊಡವೂರಿನ ವೃತ್ತದ ಬಳಿ ತುಳು ಲಿಪಿ ನಾಮಫಲಕವನ್ನು ಆಳುಪ ರಾಜವಂಶಸ್ಥರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಅನಾವರಣಗೊಳಿಸಿ “ನಾವು ಅನ್ಯರೊಂದಿಗೆ ಅವರಿಗೆ ಗೊತ್ತಿರುವ ಭಾಷೆಯಲ್ಲಿ ಸಂವಹನ ನಡೆಸಿದಾಗ ಅದು ಮನಸ್ಸನ್ನು ಮುಟ್ಟಿದರೆ,ನೆಲದ ಮಣ್ಣಿನ ಅಂತರ್ಸತ್ವದೊಂದಿಗೆ ಭಾವನೆಗಳಿಂದ ಮಿಳಿತವಾದ ಮಾತೃ ಭಾಷೆಯಲ್ಲಿ ಸಂವಹನ ನಡೆಸಿದರೆ ಅದು ಅವರ ಹೃದಯವನ್ನು ಮುಟ್ಟಬಲ್ಲದು.ಈ ನಿಟ್ಟಿನಲ್ಲಿ ತುಳುವರಾದ ನಾವೆಲ್ಲ 2500 ವರುಷಗಳ ಇತಿಹಾಸವುಳ್ಳ ನಮ್ಮ ಮಾತೃ ಭಾಷೆ ತುಳುವಿನ ಮೇಲೆ ಅಭಿಮಾನ,ಗೌರವ ಇಟ್ಟುಕೊಂಡು ತುಳು ಸಾಹಿತ್ಯ, ಸಂಸ್ಕೃತಿ,ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಕೈ ಜೋಡಿಸೋಣ” ಎಂದು ಹೇಳಿದರು.
ಕೊಡವೂರಿನಲ್ಲಿ ನಡೆದ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸುವ ಕಾರ್ಯಕ್ರಮ ಈ ಸಂದರ್ಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿದರು.
ಸ್ಥಳೀಯ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಕೊಡವೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರಾಜ ಎ.ಸೇರಿಗಾರ್,ಸುಧಾ ಎನ್ ಶೆಟ್ಟಿ,ಬೇಬಿ ಮೆಂಡನ್, ರಾಮ ಸೇರಿಗಾರ್ ಶ್ರೀನಿವಾಸ್ ಬಾಯರಿ, ಭಾಸ್ಕರ್ ಶೆಟ್ಟಿ, ಪ್ರಶಾಂತ್ ಜಿ ಕೊಡವೂರು,ಜೀವನ್ ಕುಮಾರ್ ಪಾಳೆಕಟ್ಟೆ, ಪ್ರವೀಣ್ ಜಿ ಕೊಡವೂರು, ಸರೋಜಿನಿ ವಿಜಯ್, ಯಶೋಧ ಕೇಶವ್, ಕಿರಣ್ ತುಳುವೆ, ರಾಜೇಶ್ ತುಳುವೆ, ಜಗದೀಶ ಕಲ್ಕಳ ಉಪಸ್ಥಿತರಿದ್ದರು. ಜೈ ತುಳುನಾಡ್ ಸಂಘಟನೆಯ ಶರತ್ ಕೊಡವೂರು ಸ್ವಾಗತಿಸಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ ಸತೀಶ್ ಕೊಡವೂರು ಪ್ರಸ್ತಾವನೆಗೈದರು. ಉಜ್ವಲ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.