ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಭಾರಿ ಮಳೆ: ಎನ್ ಡಿಆರ್ ಎಫ್ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
August 9, 2020, 1:02 PM

ಮಡಿಕೇರಿ(reporterkarnatakanews): ಕೊಡಗಿನ ತಲಕಾವೇರಿ ಸಮೀಪ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ನೆಲಸಮಾಧಿಯಾದ ಎರಡುಮನೆಗಳಿಂದ ಮೃತದೇಹಗಳನ್ನು ಹೊರತೆಗೆಯಲು ಆರಂಭಿಸಲಾದ ಎನ್ ಡಿಆರ್ ಎಫ್ ಕಾರ್ಯಾಚರಣೆಯನ್ನು ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಎನ್ ಡಿಆರ್ ಎಫ್ ಕಾರ್ಯಾಚರಣೆ ಶುಕ್ರವಾರ ಆರಂಭಗೊಂಡಿದ್ದು, ಮಣ್ಣಿನಡಿಯಲ್ಲಿ ಸಮಾಧಿಯಾದ ಮನೆಯಿಂದ ಒಂದು ಮೃತದೇಹವನ್ನು ಶನಿವಾರ ಹೊರ ತೆಗೆಯಲಾಗಿತ್ತು. ಮೃತದೇಹವನ್ನು ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಹಿರಿಯ ಸಹೋದರ ಆನಂದ ತೀರ್ಥ ಅವರದ್ದು ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಮೃತದೇಹದ ಪತ್ತೆ ಕಾರ್ಯ ಮುಂದುವರಿದಿತ್ತು. ಆದರೆ ಭಾನುವಾರ ನಿರಂತರವಾಗಿ ಭಾರಿ ಮಳೆಯಾದಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.

ಮನೆ ಮೇಲೆ ಬೆಟ್ಟ ಕುಸಿದ ಪ್ರದೇಶದಕ್ಕೆ ಜೇಸಿಬಿ ಕೊಂಡೋಗಲು ಇದುವರೆಗೆ ಸಾಧ್ಯವಾಗಲಿಲ್ಲ. ಗುಡ್ಡ ಕುಸಿದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ತುಂಬಿರುವುದು ಜೇಸಿಬಿ ಕೊಂಡೋಗಲು ಅಡ್ಡಿ ಉಂಟು ಮಾಡಿದೆ. ಮಣ್ಣಿನಲ್ಲಿ ಕಾಲಿಡುವಾಗ ಹೂತು ಹೋಗುವ ಸಾಧ್ಯತೆಗಳು ಅಧಿಕವಾಗಿದೆ. ಇದರಿಂದ ಎನ್ ಡಿಆರ್ ಎಫ್ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಬೆಟ್ಟ ಕುಸಿತದಿಂದ ತಲಕಾವೇರಿ ದೇವಸ್ಥಾನದ ಅರ್ಚಕರಾದ ನಾರಾಯಣ ಆಚಾರ್, ಪತ್ನಿ ಶಾಂತ ಆಚಾರ್, ಅವರ ಸಹೋದರ ಆನಂದ ತೀರ್ಥ ಸ್ವಾಮಿ , ಸಹಾಯಕ ಅರ್ಚಕರಾದ ಪವನ್ ಮತ್ತು ರವಿ ಕಿರಣ್ ಅವರು ಮನೆಯೊಳಗೆ ಸಿಲುಕಿದ್ದರು. ಇದರಲ್ಲಿಆನಂದ ತೀರ್ಥರ ಮೃತದೇಹ ಪತ್ತೆಯಾಗಿದೆ.