4:50 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ಇತ್ತೀಚಿನ ಸುದ್ದಿ

ಡ್ರಗ್ಸ್ : ತಿಮಿಂಗಿಲಗಳ ಬದಲು ಮರಿ ಮೀನುಗಳ ಹಿಡಿಯುವ ಬಗ್ಗೆ ಮುನೀರ್ ಕಾಟಿಪಳ್ಳ ಏನು ಹೇಳುತ್ತಾರೆ ?

September 19, 2020, 6:49 PM

ಮಂಗಳೂರು(reporterkarnataka news)

ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಅಮನ್ ಶೆಟ್ಟಿ ಬಂಧನವನ್ನು ಮಹಾನ್ ಸಾಧನೆ ಎಂಬಂತೆ ಬಿಂಬಿಸುವ ಕುರಿತು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಫೇಸ್ ಬುಕ್ ನಲ್ಲಿ ಏನು ಬರೆದಿದ್ದಾರೆ ಎಂಬುವುದನ್ನು ಓದೋಣ. ಮುನೀರ್ ಅವರ ಬರವಣಿಗೆಯನ್ನು ಓದುಗರಿಗೆ ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.

ಡ್ರಗ್ಸ್ ಕೇಸ್ ನಲ್ಲಿ ಮಂಗಳೂರಿನ ಕಿಶೋರ್ ಅಮಾನ್ ಶೆಟ್ಟಿಯ ಬಂಧನಕ್ಕೆ ಸಿಗುತ್ತಿರುವ ಬಿಲ್ಡಪ್ ಕಂಡು ಅಚ್ಚರಿಯಾಗುತ್ತಿದೆ. ಈತ ನಾನು ದಿನಾ ನೋಡುವ ಹುಡುಗ. ಪುಟಾಣಿ ಮಗುವಾಗಿದ್ದ ದಿನದಿಂದಲೂ ಕಂಡಿದ್ದೇನೆ. ನಾನು ಮನೆಗೆ ತೆರಳುವ ದಾರಿಯಲ್ಲೇ ಕುಳಾಯಿಯ ಸರಕಾರಿ ಜಾಗದಲ್ಲಿ ಈತನ ಮುರುಕಲು ಮನೆ ಇದೆ. ಐದಾರು ವರ್ಷಗಳ ಹಿಂದೆ ಕಷ್ಟಪಟ್ಟು ಡ್ಯಾನ್ಸ್ ಕಲಿತು “ಡ್ಯಾನ್ಸ್ ಇಂಡಿಯಾ ಡ್ಯಾನ್ಸ್” ಸೆಮಿ ಫೈನಲ್ ಹಂತಕ್ಕೆ ತಲುಪಿದರಿಂದ ಒಂದಿಷ್ಟು ಜನಪ್ರಿಯತೆ ಗಳಿಸಿದ್ದ. ಯಾವುದೋ ಒಂದು ಹಿಂದಿ ಡ್ಯಾನ್ಸಿಂಗ್ ಸಿನೆಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ. ಇತ್ತೀಚೆಗೆ ಒಂದು ವರ್ಷದಿಂದ ಯಾವುದೇ ಅವಕಾಶಗಳಿಲ್ಲದೆ ಬರಿಗೈ ದಾಸನಾಗಿ ಕುಳಾಯಿಯ ಮನೆಯಲ್ಲೇ ಇದ್ದ. ಯಾರದೋ ಸ್ಕೂಟರ್, ಬೈಕಿನಲ್ಲಿ ಓಡಾಡುತ್ತಿದ್ದ, ಸಂಜೆ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾ, ಸಣ್ಣ ಪುಟ್ಟ ಖರ್ಚಿಗೂ ದುಡ್ಡಿಗಾಗಿ ಪರದಾಡುತ್ತಿದ್ದ ಎಂದು ಈತನ ನೆರೆಕರೆಯ  ಗೆಳೆಯರು ಹೇಳುತ್ತಾರೆ.

ಅಂತಹ ಹುಡುಗನನ್ನು ಮೀಡಿಯಾಗಳು ಡ್ರಗ್ ಜಾಲದಲ್ಲಿ ಶಾಮೀಲಾದ ಹಿಂದಿ ಸಿನೆಮಾದ ಸೆಲೆಬ್ರಿಟಿಯ ಬಂಧನ ಎಂದು ವಿಜ್ರಂಭಿಸುತ್ತಿರುವುದು, ಪೊಲೀಸರು ಕಾಲರ್ ಹಾರಿಸುತ್ತಿರುವುದು ಯಾಕೋ ತಿಳಿಯುತ್ತಿಲ್ಲ. ಗ್ರಾಂ ಗೆ ಸಾವಿರಾರು ರೂಪಾಯಿ ಬೆಲೆ ಬಾಳುವ ದುಬಾರಿ ಡ್ರಗ್ಸ್ ಖರೀದಿಸುವ ಸಾಮರ್ಥ್ಯ ಈತನಿಗೆ ಇರುವುದು ಸಾಧ್ಯವೇ ಇಲ್ಲ. ಇನ್ನು ಅಪರೂಪಕ್ಕೆ “ದೊಡ್ಡವರ” ಮಕ್ಕಳ ಪಾರ್ಟಿಯಲ್ಲಿ “ಅಮಲೇರಿಸಿಕೊಳ್ಳುವ” ಸಾಧ್ಯತೆ ಇರಬಹುದು. ಪೆಡ್ಲರ್ ಅಂತು ಆಗಿರಲಾರ, ಹಾಗಿದ್ದರೆ ಆತ ಸಣ್ಣಪುಟ್ಟ ಖರ್ಚಿಗೂ ಪರದಾಡುತ್ತಿರಲಿಲ್ಲ.  

ಬಡವರ ಮನೆಯ ಮಕ್ಕಳು ಕಷ್ಟ ಪಟ್ಟು ಮೇಲೆ ಬಂದು, ಥಳಕು ಬಳಕಿನ ಲೋಕದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಕಿಶೋರ್ ಹಾಗೆ ಜಾರಿ ಬಿದ್ದಿರಲೂ ಬಹುದು. ಆ ಕುರಿತು ಕಾನೂನು ಕ್ರಮ ಜರುಗಲಿ. ಆದರೆ, ಆತನನ್ನು ಸೆಲೆಬ್ರಿಟಿ, ಬಾಲಿವುಡ್ ಸ್ಟಾರ್, ಶೋಕಿಲಾಲ ಸಿರಿವಂತ ಎಂದು ಬಿಂಬಿಸಿ ಪ್ರಚಾರ ಮಾಡುವುದು ಸರಿಯಲ್ಲ. ನಿಜಕ್ಕೂ ನಡೆಯ ಬೇಕಿರುವುದು ಕಿಶೋರ್ ನಂತಹ ಹುಡುಗರಿಗೆ ಡ್ರಗ್ ತಲುಪಿಸುವ ಜಾಲದ ಏಜಂಟರು, ಕಿಂಗ್ ಪಿನ್ ಗಳು ಯಾರು ಎಂಬುದು. ಮೊನ್ನೆ ಸಂಜೆ ಕ್ರಿಕೆಟ್ ಮೈದಾನದಿಂದ ಗೆಳೆಯನ ಜೊತೆ ಹೊರಟ ಈತ ತಲುಪಿದ ಮಾದಕ ದ್ರವ್ಯ ಜಾಲದ ಏಜಂಟ ಯಾರು, ಆ ಏಜಂಟನ ಬಾಸ್ ಯಾರು ? ಎಂಬುದು ತನಿಖೆಯಾಗಲಿ‌. ಅವರ ಬಂಧನ ನಡೆಯಲಿ. 

ಇಲ್ಲದಿದ್ದರೆ ಇದು ಮಾಧ್ಯಮಗಳಲ್ಲಿ ಎರಡು ದಿನಗಳ ರಂಗಿನಾಟ, ಪೊಲೀಸರಿಗೆ ಡ್ರಗ್ಸ್ ಜಾಲದ ಹಿಂದೆ ಬಿದ್ದಿದ್ದೇವೆ ಎಂದು ತೋರಿಸಲೊಂದು ಪ್ರಕರಣ. ವಿದ್ಯಾರ್ಥಿಗಳ, ಯುವಜನರ ಬದುಕಿಗೆ ಪ್ರತಿದಿನ ಕೊಳ್ಳಿ ಇಡುವು ಡ್ರಗ್ಸ್ ಮಾಫಿಯಾದ ಒಂದು ಕೂದಲೂ ಇದರಿಂದ ಕೊಂಕುವುದಿಲ್ಲ. ಪೊಲೀಸರು ಕಿಶೋರ್ ಮತ್ತಿತರ ಯುವಕರಿಗೆ ಡ್ರಗ್ಸ್ ಸರಬರಾಜು ಮಾಡುವ ಜಾಲದ ಹಿಂದೆ ಬೀಳಲಿ. ಮಾಧ್ಯಮಗಳು ಆ ನಿಟ್ಟಿನಲ್ಲಿ‌‌ ಸುದ್ದಿ, ಸದ್ದು ಮಾಡಲಿ. ಇಲ್ಲದಿದ್ದರೆ ಬರೀ ಹುತ್ತವ ಬಡಿದು ಕಾಳಿಂಗ ಹಾವು ಹಿಡಿದೆವು ಎಂದು ಹೇಳುವ ಕತೆಯಷ್ಟೇ ಇದು.

ಇತ್ತೀಚಿನ ಸುದ್ದಿ

ಜಾಹೀರಾತು