ಇತ್ತೀಚಿನ ಸುದ್ದಿ
ಜಾಹೀರಾತಿಗಾಗಿ ಟಿವಿ ಚಾನೆಲ್ ಗಳ ನಕಲಿ ಟಿಆರ್ ಪಿ: ಮುಂಬೈ ಪೊಲೀಸರಿಂದ ಇಬ್ಬರು ವಶಕ್ಕೆ
October 8, 2020, 6:35 PM

ಮುಂಬೈ(reporterkarnataka news): ಟೆಲಿವಿಷನ್ ವೀಕ್ಷಕರ ಸಂಖ್ಯೆಯನ್ನು ನಿರ್ಧರಿಸುವ ನಕಲಿ ಟಿ ಆರ್ ಪಿ ಜಾಲ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ವನ್ನು ಮುಂಬೈ ಪೊಲೀಸರು ಬೇಧಿಸಿದ್ದಾರೆ. ಎಷ್ಟು ಮಂದಿ ವೀಕ್ಷಕರು ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎಂಬುದನ್ನು ಟಿ ಆರ್ ಪಿ ಸೂಚಿಸುತ್ತದೆ. ಇದರ ಆಧಾರದಲ್ಲಿ ಜಾಹೀರಾತು ಸಂಸ್ಥೆಗಳು ಜಾಹೀರಾತು ಬಿಡುಗಡೆ ಮಾಡುತ್ತವೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಪರಂ ವೀರ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರದ ಎರಡು ಚಾನೆಲ್ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಮಧ್ಯೆ ನಕಲಿ ಟಿ ಆರ್ ಪಿ ಜಾಲಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ರಾಷ್ಟ್ರ ಮಟ್ಟದ ಇಂಗ್ಲೀಷ್ ಸುದ್ದಿ ವಾಹಿನಿ ಹೇಳಿದೆ. ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ರಹಸ್ಯ ಬಯಲು ಮಾಡುವ ಸಂಬಂಧ ನಿರಂತರವಾಗಿ ನಡೆಸುತ್ತಿರುವ ಹೋರಾಟ ಸಹಿಸದಿರುವ ಕೆಲವು ಶಕ್ತಿಗಳು , ಸುದ್ದಿ ವಾಹಿನಿಯ ಹೆಸರು ಎಳೆದು ತರಲು ಯತ್ನಿಸುತ್ತಿವೆ ಎಂದು ಇಂಗ್ಲೀಷ್ ಸುದ್ದಿವಾಹಿನಿಯೊಂದು ಪ್ರತ್ಯಾರೋಪ ಮಾಡಿದೆ.