ಇತ್ತೀಚಿನ ಸುದ್ದಿ
ಚಾಹಲ್ ಮೋಡಿಗೆ ಹಳಿ ತಪ್ಪಿದ ಹೈದರಾಬಾದ್, ಆರ್ಸಿಬಿಗೆ ಗೆಲುವಿನಾರಂಭ
September 21, 2020, 11:55 PM

ದುಬಾಯಿ(Reporter Karnataka News)
ಪ್ರಸಕ್ತ ಐಪಿಎಲ್ ಸರಣಿಯ ಮೊದಲ ಪಂದ್ಯವನ್ನಾಡಿದ ಆರ್ಸಿಬಿ ಹೈದರಬಾದ್ ಸನ್ರೈಸರ್ಸ್ ತಂಡವನ್ನು ಹತ್ತು ರನ್ಗಳಿಂದ ಮಣಿಸಿ ಗೆಲುವಿನ ಆರಂಭವನ್ನು ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬೆಂಗಳೂರು ಯುವ ಕ್ರಿಕೆಟಿಗ ದೇವದತ್ತ್ ಪಡಿಕ್ಕಲ್ ಅವರ ಜವಾಬ್ದಾರಿಯುತ 56 ಹಾಗೂ ಮಿ.360 ಎಬಿಡಿ ವಿಲಿಯರ್ಸ್ ಅವರ 51 ರನ್ಗಳ ನೆರವಿನಿಂದ 163 ರನ್ನುಗಳ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. ಒಂದು ಹಂತದಲ್ಲಿ ದೊಡ್ಡ ಮೊತ್ತವನ್ನು ದಾಖಲಿಸುವ ಭರವಸೆ ಮೂಡಿದ್ದರು ಬಳಿಕ ಬೆಂಗಳೂರು ಆಟ ನಿಧಾನ ಗತಿಯಿಂದ ಸಾಗಿತು.

164 ರನ್ನುಗಳ ಬೆನ್ನು ಹತ್ತಿದ್ದ ಎಸ್ಆರ್ಎಚ್ ಉತ್ತಮ ಆರಂಭವನ್ನು ಪಡೆಯಿತು. ವಾರ್ನರ್ ಬೇಗನೆ ರನ್ ಔಟ್ ಆದರೂ ಬೇರ್ ಸ್ಟೊ(61) ಹಾಗೂ ಕನ್ನಡಿಗ ಮನೀಷ್ ಪಾಂಡೆ(34) 71 ರನ್ನುಗಳ ಜತೆಯಾಟ ಆರ್ಸಿಬಿಯಿಂದ ಪಂದ್ಯವನ್ನು ಕಸಿಯುವಂತೆ ಕಂಡಿತು. ಆದರೆ ಈ ಸಂದರ್ಭ ದಾಳಿಗಿಳಿದ ಯುಜುವೇಂದ್ರ ಚಾಹಲ್ ಇಡೀ ಪಂದ್ಯವನ್ನೆ ಉಲ್ಟಾ ಮಾಡಿ ಬಿಟ್ಟರು.
ಮೊದಲಿಗೆ ಮನೀಷ್ ಪಾಂಡೆಯನ್ನು ಮಿಡ್ ಆಫ್ನಲ್ಲಿ ಕ್ಯಾಚ್ ಕೊಡಿಸುವ ಮೂಲಕ ಔಟ್ ಮಾಡಿಸಿದರೆ. ಬಳಿಕ ಅರ್ಧ ಶತಕ ದಾಖಲಿಸಿದ್ದ ಜಾನಿ ಬೇರ್ ಸ್ಟೊ ಅವರನ್ನು ಬೌಲ್ಡ್ ಮಾಡಿ ಆಘಾತ ನೀಡಿದರು. ವಿಜಯ್ ಶಂಕರ್ ಅವರನ್ನು ಗೂಗ್ಲಿಯಿಂದ ಕಟ್ಟಿ ಹಾಕಿದರು. ಈ ರೀತಿ ಒಮ್ಮೆಲೆ ನಾಟಕೀಯ ಪತನ ಕಂಡ ಎಸ್ಆರ್ಎಚ್ ಆಮೇಲೆ ಎದ್ದು ನಿಲ್ಲಲಿಲ್ಲ.
ಚಾಹಲ್ ನಾಲ್ಕು ಓವರ್ಗಳಲ್ಲಿ ಕೇವಲ 18 ರನ್ಗಳಿಗೆ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ನವದೀಪ್ ಸೈನಿ ಕೂಡ 25 ರನ್ಗಳಿಗೆ 2 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸದಾ ಹೈದರಾಬಾದ್ ವಿರುದ್ಧ ಮುಗ್ಗರಿಸುತ್ತಿದ್ದ ಬೆಂಗಳೂರು ಈ ಬಾರಿಯ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದು ಆರ್ಸಿಬಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ.