ಇತ್ತೀಚಿನ ಸುದ್ದಿ
ಇಂಗ್ಲೆಂಡಿನಿಂದ ಮಂಗಳೂರಿಗೆ 56 ಮಂದಿ ಆಗಮನ: ಕೋವಿಡ್ ತಪಾಸಣೆಗೆ ವಿಶೇಷ ತಂಡ
December 22, 2020, 8:43 PM

ಮಂಗಳೂರು(reporterkarnataka news): ಇಂಗ್ಲೆಂಡ್ ನಲ್ಲಿ ಕೊರೊನಾ ಹೊಸ ಪ್ರಭೇದ ಕಂಡು ಬಂದ ಬೆನ್ನಿಗೆ ಬ್ರಿಟನ್ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿಯೂ ಕೊರೊನಾ 2ನೇ ಅಲೆ ಭೀತಿ ಉಂಟಾಗಿದೆ. ಈ ನಡುವೆ ಮಂಗಳೂರಿಗೆ ಯುಕೆಯಿಂದ ಆಗಮಿಸಿದವರ ತಪಾಸಣೆಗೆ ಮೂವರ ವಿಶೇಷ ತಂಡ ರಚಿಸಲಾಗಿದೆ.
ಇಂಗ್ಲೆಂಡ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಆದರೂ ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಅವರು ‘ರಿಪೋರ್ಟರ್ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದವರು ಬ್ರಿಟನ್ ಏರ್ವೇಸ್, ಇಂಡಿಯನ್ ಏರೈಲೈನ್ಸ್ ಸಹಿತ ವಿವಿಧ ವಿಮಾನಯಾನ ಸೇವಾ ಸಂಸ್ಥೆಗಳ ಮೂಲಕ ಪ್ರಯಾಣಿಸಿದ್ದಾರೆ. ಡಿ.7ರಿಂದ ಇಲ್ಲಿಯವರೆಗೆ 56 ಮಂದಿ ಬಂದಿದ್ದಾರೆ. ಡಿ.21ರಂದೇ 15 ಮಂದಿ ಮಂಗಳೂರು ತಲುಪಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲಕ ಮಂಗಳೂರಿಗೆ ಬಂದವರಾಗಿದ್ದಾರೆ ಎಂದು ಬಾಯಾರಿ ತಿಳಿಸಿದರು.
ಜಿಲ್ಲೆಗೆ ಆಗಮಿಸಿದವರಲ್ಲಿ ಈಗಾಗಲೇ ಮೂವರನ್ನು ಸಂಪರ್ಕಿಸಲಾಗಿದೆ. ಡಿ.23ರಂದು ಅವರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಬೆಳಗ್ಗೆ 11 ಗಂಟೆಯೊಳಗೇ ಪರೀಕ್ಷೆ ಮುಗಿಯಲಿದೆ. ಸಂಜೆ 5ರಿಂದ 6 ಗಂಟೆಯೊಳಗೆ ವರದಿ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.