ಇತ್ತೀಚಿನ ಸುದ್ದಿ
ಹೊಸ ವರುಷದಲ್ಲಿ ಹೊಸ ಕನಸು ಹೊತ್ತಿರುವ ಕುಡ್ಲದ ಪೊಣ್ಣು, ನಟಿ, ರೂಪದರ್ಶಿ ಚಾಂದಿನಿ ಅಂಚನ್
December 11, 2020, 1:10 PM

ಲತಾ ಎ. ಕಲ್ಲಡ್ಕ ಮಂಗಳೂರು
info.reporterkarnataka@gmail.com
ಈಕೆ ಚಾಂದಿನಿ ಆಂಚನ್…. ಕರಾವಳಿಯ ಹುಡ್ಗಿ. ಮತ್ತೂ ಹೇಳುವುದಿದ್ದರೆ ಕುಡ್ಲದ ಪೊಣ್ಣು. ಮಾಡೆಲಿಂಗ್ ನಿಂದ ಬೆಳ್ಳಿ ತೆರೆಗೆ ಕಾಲಿಟ್ಟ ಬೆಡಗಿ.
ತುಳು ಆಲ್ಬಂನಲ್ಲಿ ಮುಖಕ್ಕೆ ಬಣ್ಣ ಹಚ್ಚಿಸಿಕೊಳ್ಳುವ ಮೂಲದ ಚಾಂದಿನಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದಾರೆ. ತೆಲುಗಿನ ‘ರುದ್ರ ಐಪಿಎಸ್’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡುವ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜತೆ ‘ಹೋಮ್ ಮಿನಿಸ್ಟರ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಳಿಕ ತುಳು ಮೂವಿ ‘ಕಾರ್ಣಿಕದ ಕಲ್ಲುರ್ಟಿ’ ಸಿನಿಮಾದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಒಬ್ಬರು ಮಹಾನ್ ಕಲಾವಿದ ಎಂದು ಹೇಳುವ ಚಾಂದಿನಿ ಅವರು, ಉಪೇಂದ್ರ ಸರ್ ಅವರಲ್ಲಿ ಕಲಿಯುವುದು ತುಂಬಾ ಇದೆ ಎನ್ನುತ್ತಾರೆ. ನನಗೆ ನಟನೆ ಬಗ್ಗೆ ತುಂಬಾನೇ ಹೇಳಿ ಕೊಟ್ರು ಎಂದು ಹೇಳುತ್ತಾರೆ ಚಾಂದಿನಿ.
ಮಂಗಳೂರಿನ ಸೈಂಟ್ ಆ್ಯನ್ಸ್ ಕಾಲೇಜಿನಲ್ಲಿ ಪಿಯುಸಿ ಕಲಿತ ಸುಪ್ರಿಯಾ ಅಂಚನ್ ಅವರೇ ಮುಂದೆ ಬಣ್ಣದ ಜಗತ್ತಿಗೆ ಕಾಲಿಡುವಾಗ ಚಾಂದಿನಿ ಆಗಿ ಬದಲಾದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದರು. ಕಾಲೇಜಿನ ದಿನಗಳಲ್ಲೇ ಡ್ಯಾನ್ಸ್ ಗೀಳು. ನಂತರ ಮಾಡೆಲಿಂಗ್ ಜಗತ್ತು ಕೈಬೀಸಿ ಕರೆಯಿತು. 2014ರಲ್ಲಿ ದೆಹಲಿಯಲ್ಲಿ ನಡೆದ ಮಿಸ್ ಗ್ಲೋರಿ ಆಫ್ ಇಂಡಿಯಾದಲ್ಲಿ ಅವರು ಭಾಗವಹಿಸಿದ್ದಾರೆ.
ಚಾಂದಿನಿ ಅವರು ಮೊದಲಿಗೆ ‘ಮೋಕೆದ ಮಗಳ್ ‘ ತುಳು ಆಲ್ಬಂನಲ್ಲಿ ನಟಿಸಿದರು. ನಂತರದ ದಿನಗಳಲ್ಲಿ ಆಲ್ಬಂ ಸಾಂಗ್ ನಲ್ಲಿ ಅವಕಾಶಗಳು ಬಂದವು. ಬಳಿಕ ತೆಲುಗಿನಿಂದ ಆಫರ್ ಬಂತು.
ನಂತರ ಉಪೇಂದ್ರ ಅವರ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದರು. ಉಪೇಂದ್ರ ಸರ್ ಜತೆಗೆ ನಟಿಸಿದ್ದು ಬದುಕಿನ ಬಲು ದೊಡ್ಡ ಅನುಭವ ಎಂದು ಚಾಂದಿನಿ ಪದೇ ಪದೇ ಹೇಳುತ್ತಾರೆ.
ಚಾಂದಿನಿಯವರು ಬಿಡುವಿನ ಸಮಯದಲ್ಲಿ ಡ್ಯಾನ್ಸ್ ಜತೆಗೆ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಹೊಸ ವರ್ಷದಲ್ಲಿ ಹತ್ತು ಹಲವು ಹೊಸ ಕನಸುಗಳನ್ನು ಹೊತ್ತಿದ್ದಾರೆ. ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಆಗಿರುವ ಅವರ ಕನಸುಗಳು ಸಾಕಾರಗೊಳ್ಳಲಿ ಎಂದು ಹಾರೈಸುತ್ತೇವೆ.