ಇತ್ತೀಚಿನ ಸುದ್ದಿ
ಹೀಗೊಂದು ಪರಾಕ್ರಮ!!:ಬೆಕ್ಕಿಗೆ ಗುಂಡಿಕ್ಕಿ ಕೊಂದು ಶೌರ್ಯ ಮೆರೆದ ವಿಕೃತ ವ್ಯಕ್ತಿ
August 23, 2020, 10:15 AM

ಬೆಂಗಳೂರು(reporterkarnataka news):
ಮನುಷ್ಯ ಎಷ್ಟು ನಿರ್ದಯಿ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾನೆ. ತನ್ನ ವಿಕೃತ ಮನಸ್ಥಿತಿಯಿಂದ ಹೊರ ಬರಲಾಗದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಬಡಪಾಯಿ ಬೆಕ್ಕೊಂದನ್ನು ಕೊಂದು ಶೌರ್ಯ ಮೆರೆದಿದ್ದಾನೆ.
ಇದೆಲ್ಲ ನಡೆದದ್ದು ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ. ಶನಿವಾರ ತಡರಾತ್ರಿ ಈ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ. ಡಬಲ್ ಬ್ಯಾರಲ್ ಗನ್ ನಿಂದ ಗುಂಡು ಹಾರಿಸಿ ಸುಮಾರು 2 ವರ್ಷ ಪ್ರಾಯದ ಬೆಕ್ಕನ್ನು ಕೊಂದು ಹಾಕಲಾಗಿದೆ. ಬೆಕ್ಕಿನ ಎದೆ ಭಾಗದಿಂದ ಸ್ವಲ್ಪ ಕೆಳಗಡೆ ಬುಲೆಟ್ ದೇಹದೊಳಗೆ ಹೊಕ್ಕಿದೆ.

ಸರ್ಜಾಪುರದ ವಿಲ್ಲಾವೊಂದರಲ್ಲಿ ವಾಸಿಸುತ್ತಿರುವ ಶೀಲಾ ಎಂಬವರಿಗೆ ಸೇರಿದ ಬೆಕ್ಕು ಇದಾಗಿದೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ವಠಾರದಲ್ಲಿ ಡಬಲ್ ಬ್ಯಾರೆಲ್ ಗನ್ ಹೊಂದಿದ ವ್ಯಕ್ತಿ ವಾಸಿಸುತ್ತಿದ್ದಾನೆಯೇ ಎಂದು ಚಿಂತಿತರಾಗಿದ್ದಾರೆ. ಸರ್ಜಾಪುರ ಠಾಣೆಗೆ ದೂರು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ ಜಾಸ್ತಿಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಮಾಡಲು ಮೂಕ ಪ್ರಾಣಿಗಳಿಗೆ ಹಿಂಸಿಸುವ ಪ್ರವೃತ್ತಿಯೂ ಜಾಸ್ತಿಯಾಗುತ್ತಿದೆ.