ಇತ್ತೀಚಿನ ಸುದ್ದಿ
ದೇಶದ ಮೊದಲ ಐ ಫೋನ್ ಕಂಪನಿ ಘಟಕದಲ್ಲಿ ದಾಂಧಲೆ: ಮಾಹಿತಿಗೆ ಪ್ರಧಾನಿ ಕಚೇರಿ ಸೂಚನೆ
December 13, 2020, 9:43 AM

ಕೋಲಾರ(reporterkarnataka news): ವೇತನಕ್ಕಾಗಿ ಆಗ್ರಹಿಸಿ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದ ಕಾರ್ಮಿಕರ ದಾಂಧಲೆಯಿಂದಾಗಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ದೇಶದ ಮೊದಲ ಐಫೋನ್ ಕಂಪನಿಗೆ 50 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಘಟನೆ ಕುರಿತು ಮಾಹಿತಿ ನೀಡುವಂತೆ ಪ್ರಧಾನಿ ಕಚೇರಿ ಸೂಚಿಸಿದೆ.ದೇಶದಲ್ಲೇ ಮೊದಲ ಬಾರಿಗೆ ಐ ಫೋನ್ ಬಿಡಿಭಾಗಗಳನ್ನ ತಯಾರಿಸುವ ವಿಸ್ಟ್ರಾನ್ ಕಂಪನಿಯ ವಿರುದ್ದ ನೌಕರರು ಬಂಡೆದ್ದಿದ್ದು, ರೊಚ್ಚಿಗೆದ್ದ ಕಾರ್ಮಿಕರು ಬೆಳ್ಳಂಬೆಳಿಗ್ಗೆ ಕಂಪನಿಯಲ್ಲಿನ ಗಾಜುಗಳನ್ನ ಚೂರು ಚೂರು ಮಾಡಿ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶಪಡಿಸಿ ಧಾಂಧಲೆ ನಡೆಸಿದ್ದಾರೆ. ಎರಡು ಎಲೆಕ್ಟ್ರಾನಿಕ್ ವಾಹನಕ್ಕೆ ಬೆಂಕಿ ಹಚ್ಚಿ ಕಂಪನಿಗೆ ಸೇರಿದ ಕಾರುಗಳನ್ನು ಧ್ವಂಸ ಮಾಡಿದ್ದಾರೆ. ಕಂಪನಿಗೆ ಸುಮಾರು 50 ಕೋಟಿಗೂ ಹೆಚ್ಚು ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಾರ್ಮಿಕರು ರಾಡ್ಗಳಿಂದ ಕಂಪನಿಗೆ ಸೇರಿದ ಕಚೇರಿ ಹಾಗೂ ಕಾರಿನ ಗಾಜುಗಳನ್ನ ಪೀಸ್ ಪೀಸ್ ಮಾಡಿದ್ದಾರೆ, ಮತ್ತೊಂದೆಡೆ ಪುರುಷ ಕಾರ್ಮಿಕರಿಗಿಂದ ನಾವೇನು ಕಮ್ಮಿಯಿಲ್ಲ ಎಂಬಂತೆ ರಾಡ್ ಹಿಡಿದ ಮಹಿಳಾ ಕಾರ್ಮಿಕರು ಕಿಟಕಿ ಗಾಜು, ಕಾರುಗಳನ್ನು ನಾಶಪಡಿಸಿದ್ದಾರೆ.
ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಂಪನಿಯನ್ನು ದೇಶದಲ್ಲಿ ಮೊದಲನೇ ಬಾರಿಗೆ ಪ್ರತಿಷ್ಟಿತ ಐ ಫೋನ್ ಕಂಪನಿಯು ತನಗೆ ಬಿಡಿಭಾಗಗಳನ್ನ ಪೂರೈಸುವ ಹಿನ್ನಲೆಯಲ್ಲಿ ಸ್ಥಾಪಿಸಿತ್ತಲ್ಲದೇ ಈ ಭಾಗದ 12 ಸಾವಿರ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿತ್ತು.
ಕಳೆದ 2 ವರ್ಷದ ಹಿಂದೆ ಆರಂಭವಾಗಿದ್ದ ವಿಸ್ಟ್ರಾನ್ ಕಂಪನಿ, ಈ ವರ್ಷದ ಆರಂಭದಿಂದ ಬಿಡಿಭಾಗಗಳನ್ನ ತಯಾರಿಸಲು ಅಧಿಕೃತವಾಗಿ ಆರಂಭಿಸಿದೆ. ಆದರೆ ಕಂಪನಿಯಲ್ಲಿ ಕಾರ್ಮಿಕರಿಗೆ ದುಡಿದ ದುಡಿಮೆಯಷ್ಟು ಸಂಬಳ ನೀಡದೇ ವಂಚಿಸಿರುವ ಆರೋಪ ಕೇಳಿ ಬರುತ್ತಿದೆ.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಪಡೆದಿದ್ದು, ಕಂಪನಿ ವೇತನ ನೀಡಿದ್ದರೂ, ಗುತ್ತಿಗೆದಾರರಿಂದ ತಮಗೆ ವಂಚನೆಯಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು.
ಶನಿವಾರ ಬೆಳಗ್ಗೆ ತಮ್ಮ ಆಕ್ರೋಶದ ಕಟ್ಟೆ ಒಡೆದು ದಾಂಧಲೆ ಮಾಡುವ ಹಂತಕ್ಕೆ ಹೊಗಿದೆ. ಬೆಳಗ್ಗೆ 5 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರಾತ್ರಿ ಪಾಳಯದ 3 ಸಾವಿರಕ್ಕು ಹೆಚ್ಚು ಕಾರ್ಮಿಕರು ಹಾಗೂ ಬೆಳಗ್ಗೆ ಮೊದಲ ಶಿಪ್ಟ್ಗೆ ಆಗಮಿಸಿದ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿ, ಬಾಕಿಯಿರುವ ಎರಡು ತಿಂಗಳ ಸಂಬಳ ಹಾಗು ಹೆಚ್ಚುವರಿಯಾಗಿ ಮಾಡಿರುವ ಕೆಲಸದ ಹಣವನ್ನ ನೀಡುವಂತೆ ಆಗ್ರಹಿಸಿದ್ದಾರೆ.
ಆದರೆ ಕಾರ್ಮಿಕರ ಪ್ರತಿಭಟನೆಯನ್ನು ಆಡಳಿತ ವಿಭಾಗ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ, ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕಂಪನಿಯೊಳಕ್ಕೆ ನುಗ್ಗಿ ಗಾಜುಗಳನ್ನ ಒಡೆದು ಪುಡಿ ಪುಡಿ ಮಾಡಿದ್ದಾರೆ.
ಕಂಪನಿಯ ಎದುರೇ ಇದ್ದ ಎರಡು ಎಲೆಕ್ಟ್ರಾನಿಕ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, ಇನ್ನು ಕಂಪನಿಯ ಹಿರಿಯ ಅಧಿಕಾರಿಗಳು ಓಡಾಡುವ ನಾಲ್ಕು ಇನ್ನೋವಾ ಕಾರುಗಳನ್ನ ಸಂಪೂರ್ಣವಾಗಿ ನುಚ್ಚು ನೂರು ಮಾಡಿ ಬೆಂಕಿ ಹಚ್ಚುವ ವೇಳೆ ಪೋಲಿಸರು ಆಗಮಿಸಿ ತೀವ್ರತೆಯನ್ನ ಕಡಿಮೆ ಮಾಡಿದರು.
ಸ್ಥಳಕ್ಕೆ ಐಜಿ, ಎಸ್ಪಿ ಜಿಲ್ಲಾಧಿಕಾರಿ ಭೇಟಿ
ಮೊದಲು ಬೆಳಗ್ಗೆ 7-30 ಕ್ಕೆ ಸ್ತಳಕ್ಕೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಆಗಮಿಸಿ ಕಾರ್ಮಿಕರ ಮೇಲೆ ಲಾಠೀ ಚಾರ್ಜ್ ಮಾಡಿ ಚದುರಿಸಿದರು.
ಇತರೆ ಪೊಲೀಸ್ ಸಿಬ್ಬಂದಿಯೂ ಲಾಠೀಚಾರ್ಜ್ ಮಾಡಿದ್ದರಿಂದ ಹೊಲಗಳಲ್ಲಿ ತಪ್ಪಿಸಿಕೊಂಡು ಕಾರ್ಮಿಕರು ಓಡಲಾರಂಭಿಸಿದರು. ಒಂದು ಕಿಲೋ ಮೀಟರ್ ದೂರಕ್ಕೆ ಓಡಿಸಿದ್ದು, ಪೊಲೀಸರು ಲಾಠೀ ಚಾರ್ಜ್ ನಿಂದಾಗಿ ಕಾರ್ಮಿಕರು ಹಾಗೂ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತರು.
ಘಟನಾ ಸ್ಥಳಕ್ಕೆ ಕೊಲಾರ ಡಿಸಿ ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಗಮಿಸಿದ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದ್ದು, ಸಂಬಳ ವಿಚಾರವಾಗಿಯೇ ಗಲಾಟೆ ನಡೆದಿದೆ ಎಂದು ತಿಳಿಸಿದ್ದು, 300ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದು, ತನಿಖೆ ನಡೆಸಿ ಆರೋಪಿಗಳನ್ನ ಪತ್ತೆಹಚ್ಚಲು 10 ತಂಢ ರಚನೆ ಮಾಡಿರುವುದಾಗಿ ತಿಳಿಸಿದರು.