4:07 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರದ ಕಟ್ಟಡ ಉದ್ಘಾಟನೆ

January 10, 2021, 6:23 PM

ಉಜಿರೆ(reporterkarnataka news): ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಆಯುಷ್ ಸಚಿವಾಲಯದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದಲ್ಲಿ ದೇಶದಲ್ಲೆ ಪ್ರಥಮವಾಗಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಮಾದರಿ ಸಂಶೋಧನಾ ಕೇಂದ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹೇಳಿದರು.

ಅವರು ಧರ್ಮಸ್ಥಳದ ಶಾಂತಿವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಅನುದಾನದೊಂದಿಗೆ ಪ್ರಾರಂಭಿಸಿದ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

2014ರಲ್ಲಿ ತಾನು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ರಜತ ಮಹೋತ್ಸವ ಸಮಾರಂಭಕ್ಕೆ ಬಂದಾಗ ಕಾಲೇಜಿನ ಉತ್ತಮ ಶೈಕ್ಷಣಿಕ ಗುಣಮಟ್ಟ, ಪ್ರಯೋಗಾಲಯ ಹಾಗೂ ಸೌಲಭ್ಯಗಳನ್ನು ಗಮನಿಸಿ ಕಾಲೇಜಿಗೆ ದೇಶದಲ್ಲೆ ಪ್ರಥಮ ಸಂಶೋಧನಾ ಕೇಂದ್ರ ಮಂಜೂರು ಮಾಡಲಾಗಿದೆ.

ಈಗಾಗಲೆ ಸಂಶೋಧನಾ ಕೇಂದ್ರಕ್ಕೆ 8.73 ಕೋಟಿ ರೂ. ನೀಡಿದ್ದು, ಇನ್ನೂ 1.27 ಕೋಟಿ ರೂ. ನೆರವು ನೀಡುವುದಾಗಿ ಸಚಿವರು ಪ್ರಕಟಿಸಿದರು.

ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಸಂಶೋಧನಾ ಕೇಂದ್ರದ ಲೇಖನಗಳನ್ನು ಪ್ರಕಟಿಸಬೇಕೆಂದು ಅವರು ಸಲಹೆ ನೀಡಿದರು.

60 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ, ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಅತಿ ಕಡಿಮೆ ಸಮಯದಲ್ಲಿ ಉತ್ತಮವಾಗಿ ನಿರ್ಮಿಸಲಾಗಿದೆ ಎಂದು ಡಾ. ಹೆಗ್ಗಡೆಯವರನ್ನು ಸಚಿವರು ಅಭಿನಂದಿಸಿದರು.

ನಾಯಕತ್ವ, ಸಂಶೋಧನೆ ಹಾಗೂ ಉತ್ತಮ ಅಭ್ಯಾಸಗಳೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಲು ಸಂಶೋಧನಾ ಕೇಂದ್ರವು ಮಾರ್ಗದರ್ಶನ ಮತ್ತು ತರಬೇತಿ ನೀಡಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ ಜಿಲ್ಲಾ ಸಂಸದ ನಳಿನ್‍ಕುಮಾರ್ ಕಟೀಲ್ ಮಾತನಾಡಿ, ಯೋಗ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಗೆ ಅದರದ್ದೇ ಆದ ಬೇಡಿಕೆಯಿದೆ. ಜಗತ್ತು ಈಗ ಭಾರತದೆಡೆಗೆ ನೋಡುತ್ತಿದೆ. ಪರಂಪರಾಗತವಾಗಿ ಬಂದಿರುವ ಯೋಗ ಮತ್ತು ಆಯುರ್ವೇದಕ್ಕೆ ವಿಶೇಷವಾದ ಸ್ಥಾನಮಾನ ಕಲ್ಪಿಸಿಕೊಡಬೇಕು ಎನ್ನುವ ಕಾರಣಕ್ಕಾಗಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ತಕ್ಷಣ ಮೊದಲ ಬಾರಿಗೆ ಆಯುಷ್ ವಿಭಾಗವನ್ನು ತೆರೆದು ಅದಕ್ಕೊಂದು ಮಂತ್ರಾಲಯ ಸ್ಥಾಪಿಸಿದರು. ಇದರ ಪರಿಣಾಮವಾಗಿ ಯೋಗ ದಿನಾಚರಣೆ ಜಗತ್ತಿನ ದಿನಾಚರಣೆಯಾಗಿ ಪರಿವರ್ತನೆಯಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇಂದು ಭಾರತ ವಿಶ್ವದ ಗಮನ ಸೆಳೆದು “ವಿಶ್ವ ಗುರು” ಮಾನ್ಯತೆ ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರೂ ಹೆಗ್ಗಡೆಯವರಿಂದ ಪ್ರೇರಣೆ ಪಡೆದು ಯೋಗವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ್ದಾರೆ. ಶಾಂತಿವನದಲ್ಲಿ ನಿರ್ಮಿಸಿರುವ ಜಾನಪದ ಶೈಲಿಯ ನಾಲ್ಕು ಪ್ರಾಕೃತಿಕ ಕುಟೀರಗಳು ನಮ್ಮ ಜಿಲ್ಲೆಯ ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಕುಟೀರಗಳನ್ನು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ನಿರ್ಮಿಸಬೇಕೆಂದು ಅವರು ಸಚಿವರನ್ನು ಕೋರಿದರು.

ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಮತ್ತು ಆಸ್ಪತ್ರೆಯ ಪ್ರಗತಿ, ಸಾಧನೆಯ ಪಕ್ಷಿನೋಟ ಸಾದರಪಡಿಸಿದರು.

ಆಯುಷ್ ಮಂತ್ರಾಲಯದ ನಿರ್ದೇಶಕ ವಿಕ್ರಂ ಸಿಂಗ್ ಮಾತನಾಡಿ, ಯೋಗಾಭ್ಯಾಸಕ್ಕೂ ಸರ್ಕಾರ ಕ್ರೀಡೆಗೆ ಸಮನಾದ ಮಾನ್ಯತೆ ನೀಡಿರವುದರಿಂದ ಯೋಗ ಕಲಿತವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ರಾಜ್ಯದಲ್ಲಿ 500 ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನೂರು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಪ್ರತಿ ವರ್ಷ ರಾಜೀವ ಗಾಂಧಿ ಆರೋಗ್ಯ ವಿ.ವಿ.ಯು ಸಂಶೋಧನೆಗಾಗಿ 400 ಕೋಟಿ ರೂ. ವಿನಿಯೋಗಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ಸಂಶೋಧನಾ ಕೇಂದ್ರದ ಸದುಪಯೋಗ ಪಡೆದು ತಮ್ಮ ಜ್ಞಾನ ವರ್ಧನೆಯೊಂದಿಗೆ ವೃತ್ತಿಯ ಘನತೆ, ಗೌರವ ಕಾಪಾಡಬೇಕು ಎಂದು ಸಲಹೆ ನೀಡಿದರು.

ಆಯುಷ್ ನಿರ್ದೇಶನಾಲಯದ ಆಯುಕ್ತರಾದ ಮೀನಾಕ್ಷಿ ನೇಗಿ ಮಾತನಾಡಿ, ಈಗಾಗಲೇ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳು ಸೇವೆ ನೀಡುತ್ತಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತು ಕೇಂದ್ರಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಏಳು ಆಯುಷ್ ಗ್ರಾಮಗಳನ್ನು ರೂಪಿಸಲಾಗುವುದು ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಾರತೀಯ ನಂಬಿಕೆ ನಡವಳಿಕೆಗಳು ಸಂಪ್ರದಾಯಗಳು ಆಚಾರ-ವಿಚಾರಗಳು ಮೂಡನಂಬಿಕೆಗಳಲ್ಲ. ಎಲ್ಲವೂ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿವೆ ಎಂದರು.

ಭಾರತದಲ್ಲಿ ಸುಮಾರು ಐದು ಸಾವಿರ ವರ್ಷಗಳಿಂದ ಋಷಿ-ಮುನಿಗಳು, ಸಾಧು-ಸಂತರು ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ ಆರೋಗ್ಯ ಭಾಗ್ಯವನ್ನು ಪಡೆಯುತ್ತಿದ್ದರು. ವಿದೇಶಗಳಲ್ಲಿ ಕೂಡಾ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ ಎಂದರು.

ಧಾರವಾಡದಲ್ಲಿರುವ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯ ಈಗಾಗಲೆ ದೇಶದಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಧರ್ಮಸ್ಥಳದಲ್ಲಿರುವ ಸಂಶೋಧನಾ ಕೇಂದ್ರವನ್ನೂ  ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,  ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್ ಕೆ., ಪ್ರತಾಪಸಿಂಹ ನಾಯಕ್, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.‌ ಯಶೋವರ್ಮ ಸ್ವಾಗತಿಸಿದರು. ಕಾಲೇಜಿನ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು.  ಉಪನ್ಯಾಸಕಿ ಜೋತ್ಸ್ನಾ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು