ಇತ್ತೀಚಿನ ಸುದ್ದಿ
ಸೆ. 1ರಿಂದ ದಕ್ಷಿಣ ಕನ್ನಡದಲ್ಲಿ ಮೀನುಗಾರಿಕೆ ಆರಂಭ: ಸಚಿವ ಕೋಟಾ ಶ್ರೀನಿವಾಸ ಪ್ರಜಾರಿ ಅಭಯ
August 11, 2020, 4:12 PM

ಮಂಗಳೂರು(reporterkarnataka news): ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಈ ಹಿಂದೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸೆಪ್ಪಂಬರ್ 1 ರಿಂದ ಮೀನುಗಾರಿಕೆ ಪುನ: ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕೆ ಪುನರಾರಂಭ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಮೀನುಗಾರಿಯನ್ನು ಪ್ರಾರಂಭ ಮಾಡುವಂತೆ ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಆದರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ಸೆಪ್ಟೆಂಬರ್ ತಿಂಗಳಿಂದ ಮೀನುಗಾರಿಕೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕೆಯಲ್ಲಿ ಶೇ.75 ರಷ್ಟು ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಅವರು ರಾಜ್ಯಕ್ಕೆ ಆಗಮಿಸುವ ಮೊದಲು ಸೇವಾ ಸಿಂಧೂವಿನಲ್ಲಿ ಅರ್ಜಿ ಸಲ್ಲಿಸಬೇಕು. ರಾಜ್ಯ ಪ್ರಯಾಣ ಬೆಳಸುವವರು ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗಟಿವ್ ವರದಿ ಬಂದ ಕಾರ್ಮಿಕರು ಮಾತ್ರ ನಮ್ಮ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಕೋವಿಡ್ ಮಾರ್ಗಸೂಚಿಯಂತೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೈಟೆನ್ನಲ್ಲಿ ಇರಬೇಕು. ಬರುವ ಕಾರ್ಮಿಕರ ಜವಬ್ದಾರಿಯನ್ನು ಸಂಬಂಧಿಸಿದ ಮೀನುಗಾರಿಕೆ ಮಾಲೀಕರು ನೋಡಿಕೊಳ್ಳಬೇಕು ಎಂದರು.
ಹೊರ ರಾಜ್ಯದಿಂದ ಬಂದವರಿಗೆ ಕೋವಿಡ್ ಪರೀಕ್ಷೆಯನ್ನು ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ನಡೆಸಿ ಬೋಟ್ನಲ್ಲಿ 3 ಮೀಟರ್ ಅಂತರ ಕಾಯ್ದುಕೊಂಡು ಹೋಂ ಕ್ವಾರೈಟೆನ್ನಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರ ಜವಾಬ್ದಾರಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ಮಾರುಕಟ್ಟೆಯನ್ನು ಪ್ರತಿನಿತ್ಯ ಸ್ಯಾನಿಟೈಜರ್ ಮಾಡುವುದು ಕಡ್ಡಾಯವಾಗಿದ್ದು, ಮುಂದಿನ ದಿನದಲ್ಲಿ ಮೀನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.