ಇತ್ತೀಚಿನ ಸುದ್ದಿ
ಐಪಿಎಲ್ ಕಡಲಿನಲಿ ಗೆಲುವಿನ ಆರಂಭ ಪಡೆದ ಚೆನ್ನೈ ದೋಣಿ
September 20, 2020, 12:14 AM

ಅಬುದಾಬಿ (Reporter Karnataka News)
ಕೊರೊನಾ ಸಂಕಟದಿಂದಾಗಿ ಮುಂದೂಡಲ್ಪಟ್ಟ ಕ್ರಿಕೆಟ್ ಹಬ್ಬ ಐಪಿಎಲ್ನ ಮೊದಲ ಪಂದ್ಯ ಶನಿವಾರ ಅಬುಧಾಬಿಯ ಶೇಕ್ ಝಯಾದ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು.
ರೋಚಕ ಆರಂಭಿಕ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಿಟ್ಮ್ಯಾನ್ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸನ್ನು ಐದು ವಿಕೆಟ್ಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಕಂಡಿತು ಸಿಎಸ್ಕೆ.
ಟಾಸ್ ಗೆದ್ದ ಮಾಹಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ ಚೆನ್ನೈಗೆ 163 ರನ್ ಟಾರ್ಗೆಟ್ ನೀಡಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ವೈಫಲ್ಯದ ನಡುವೆಯೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂಬಾಟಿ ರಾಯುಡು ಹಾಗೂ ಫಾಫ್ ಡು ಪ್ಲೆಸಿಸ್ ಪಂದ್ಯದ ಗತಿಯನ್ನು ಬದಲಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಯಡು ಹಾಗೂ ಡುಪ್ಲೆಸಿಸ್ ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು.

ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ರಾಯುಡು 48 ಎಸೆತದಲ್ಲಿ 71 ರನ್ ಸಿಡಿಸಿ ಔಟಾದರು.
ಜಡೇಜಾ ಕೇವಲ 10 ರನ್ ಸಿಡಿಸಿ ನಿರ್ಗಮಿಸಿದರು. ಅಷ್ಟರಲ್ಲಿ ಮುಂಬೈ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. 2 ಸಿಕ್ಸರ್ ಮೂಲಕ ಅಬ್ಬರಿಸಿದ ಸ್ಯಾಮ್ 18 ರನ್ ಸಿಡಿಸಿ ಔಟಾದರು. ಅಂತಿಮ 10 ಎಸೆತದಲ್ಲಿ ಚೆನ್ನೈ ಗೆಲುವಿಗೆ 10 ರನ್ ಅವಶ್ಯಕತೆ ಇತ್ತು. ಡುಪ್ಲೆಸಿಸ್ ಸಿಡಿಸಿದ ಬೌಂಡರಿ ಸಿಎಸ್ಕೆ ಆತಂಕ ದೂರ ಮಾಡಿತು. ಇಷ್ಟೇ ಅಲ್ಲ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿದರು.
ಅಂತಿಮ 6 ಎಸೆತದಲ್ಲಿ ಚೆನ್ನೈ ಗೆಲುವುಗೆ 5 ರನ್ ಅವಶ್ಯಕತೆ ಇತ್ತು. ಡುಪ್ಲೆಸಿಸ್ ಬೌಂಡರಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 5 ವಿಕೆಟ್ ಗೆಲುವು ಸಾಧಿಸಿದ ಚೆನ್ನೈ ಶುಭಾರಂಭ ಮಾಡಿತು. ಡುಪ್ಲೆಸಿಸ್ ಅಜೇಯ 58 ರನ್ ಸಿಡಿಸಿದರು.
ಮುಂಬೈ ಆರಂಭಿಕ ಪಂದ್ಯದಲ್ಲಿ ಮುಗ್ಗರಿಸುವ ಸಂಪ್ರದಾಯ ಅರೇಬಿಕ್ ನೆಲದಲ್ಲೂ ಮುಂದುವರಿಯಿತು.