ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ?
November 29, 2020, 9:33 AM

ಬೆಂಗಳೂರು(reporterkarnataka news): ಬಂಗಾಳಕೊಲ್ಲಿಯಲ್ಲಿ ನಿವಾರ್ ಚಂಡಮಾರುತ ಉಂಟಾದ ಬೆನ್ನಲ್ಲೇ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ವೇದಿಕೆ ಸಜ್ಜುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ
ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯದ ವಿವಿಧೆಡೆ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ.
ಕಳೆದ ಮೂರ್ನಾಲ್ಕು ದಿನಗಳಿಂದಲೂ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿತ್ತು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ನಿವಾರ್ ಚಂಡಮಾರುತದ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದ ಮಳೆ ರಾಜ್ಯದಲ್ಲಿ ಆಗಲಿಲ್ಲ. ಚಂಡಮಾರುತ ಭೂ ಸ್ಪರ್ಶವಾದ ನಂತರ ದುರ್ಬಲಗೊಂಡಿತ್ತು. ಆದರೆ ಅದು ಮತ್ತೆ ಪ್ರಬಲಗೊಂಡು ಸಮುದ್ರದಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ವಾಯುಭಾರ ಕುಸಿತವಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ 1ರಿಂದ ಮತ್ತೆ ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮತ್ತೆ
ಮಳೆಯಾಗಬಹುದು.