ಇತ್ತೀಚಿನ ಸುದ್ದಿ
ಬಾಲ್ಯದ ಕನಸನ್ನು ಹೊತ್ತು ಸಾಗಿದ ಯುವಕನೊಬ್ಬ ಕಟ್ಟಿದ ಕನಸ ಮೋಡದ ಮೊದಲ ಹನಿ ‘ಕನಸಿನ ಮಳೆಯಾದಳು’ : ಯಾವಾಗ ರಿಲೀಸ್ ಗೊತ್ತಾ ?
December 28, 2020, 8:53 AM

ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnataka@gmail.com
ಕೊರೊನಾ ಹಾವಳಿಯಿಂದ ಲಾಕ್ಡೌನ್ ಜಾರಿಯಾದ ಬಳಿಕ ಸ್ತಬ್ಧಗೊಂಡಿದ್ದು ಕಲಾ ಕ್ಷೇತ್ರ. ನಾಟಕ ತಂಡಗಳು ಹಾಗು ಯಕ್ಷಗಾನ ಮೇಳಗಳು ಪ್ರದರ್ಶನವಿಲ್ಲದೆ ಕಂಗಾಲಾದರೆ ಸಿನಿಮಾ ಕ್ಷೇತ್ರ ಟಾಕೀಸ್ ಮುಚ್ಚಿ ಪ್ರದರ್ಶನವಿಲ್ಲದೆ ಶೂಟಿಂಗ್ ಇಲ್ಲದೆ ಮೌನಗೊಂಡಿತ್ತು.
ಇದೇ ಸಂದರ್ಭ ಓಟಿಟಿ ವೇದಿಕೆ ಹೆಚ್ಚಾಗಿ ತೆರೆದುಕೊಂಡಿತು ಹಾಗೂ ದೃಶ್ಯ ಮನೋರಂಜನಾ ಕಾರ್ಯಕ್ರಮಗಳು ಜನರಿಗೆ ಈ ಮೂಲಕ ತಲುಪಲು ಶುರುವಾಯಿತು.
ಕರಾವಳಿಯಲ್ಲಿ ಕೂಡ ಒಟಿಟಿ ಫ್ಲಾಟ್ಫಾರಂ ಆರಂಭಗೊಂಡಿದ್ದು, ಅನೇಕ ವಿಶಿಷ್ಟ ಪ್ರಯತ್ನ ಈ ಮೂಲಕ ನಡೆಯುತ್ತಿದೆ. ಹೊಸ ಸಿನಿಮಾಗಳ ಜತೆಗೆ ಕಿರುಚಿತ್ರ ಹಾಗೂ ಟೆಲಿ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಗೊಳ್ಳಲು ಅವಕಾಶ ಲಭಿಸಿತು. ಈ ನಿಟ್ಟಿನಲ್ಲಿ ಅನೇಕ ಕಿರು ಚಿತ್ರಗಳು ವೆಬ್ ಸಿರೀಸ್ಗಳು ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ಇದೇ ದಾರಿಯಲ್ಲಿ ಮತ್ತೊಂದು ಟೆಲಿ ಚಿತ್ರ ಕೂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ನವ ಯುವಕರ ಈ ತಂಡ ಹೊಸ ನಿರೀಕ್ಷೆಯನ್ನು ಮೂಡಿಸಿದೆ.
ಹೌದು, ಸನಾತನ ಕ್ರಿಯೇಶನ್ಸ್ ನಿರ್ಮಾಣದಲ್ಲಿ ಮೂಡಿದ ‘ಕನಸಿನ ಮಳೆಯಾದಳು’ ಎನ್ನುವ ಟೆಲಿ ಚಿತ್ರ ಹೊಸ ಕನಸಿನ ಯುವ ನಿರ್ದೇಶಕ ಸುಕೇಶ್ ಮಿಜಾರ್ ಅವರ ಮೊದಲ ಹೆಜ್ಜೆ.
ಸಿನಿಮಾ ರಂಗದಲ್ಲಿ ಏನಾದರೂ ಮಾಡಬೇಕು ಎನ್ನುವ ಹಂಬಲದೊಂದಿಗೆ ಹಠದೊಂದಿಗೆ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಕಲಾಕ್ಷೇತ್ರಕ್ಕೆ ಒಪ್ಪಿಸಬೇಕೆಂದು ಹಂಬಲಿಸುವ ಯುವ ನಿರ್ದೇಶಕ ಸುಕೇಶ್ ಮಿಜಾರ್ ಅವರೆ ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ.
ಹತ್ತು ಕಿರುಚಿತ್ರ ಮಾಡುವ ಬದಲಾಗಿ ಒಂದು ಉತ್ತಮ ಚಿತ್ರ ಮಾಡಿದರೆ ಒಳ್ಳೆಯದು ಎನ್ನುವ ಅವರು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಈ ಚಿತ್ರವನ್ನು ಕಟ್ಟಿದ್ದಾರೆ. ನವಿರಾದ ಪ್ರೇಮಕಥೆಯನ್ನು ಹೊಂದಿರುವ ಈ ಟೆಲಿವಿತ್ರದ ಕಥೆಯನ್ನು ರಾಮಚಂದ್ರ ಸಾಗರ್ ಅವರು ಬರೆದಿದ್ದು, ವಿನಾಯಕ ಅರಳಸುರಳಿ ಅವರು ಚಿತ್ರಕಥೆ ಬರೆದಿದ್ದಾರೆ. ಮೋಹನ್ ತೋಡಾರ್ ಅವರು ಸಹ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.
ಅನುಭವಿ ಚಿತ್ರನಟ ಪ್ರಕಾಶ್ ತುಮ್ಮಿನಾಡು ಹಾಗೂ ಆರ್.ಜೆ.ತ್ರಿಶೂಲ್ ಕೂಡ ನಟಿಸಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಿರುತೆರೆ ನಟ ವಿಕಾಸ್ ಉತ್ತಯ್ಯ ಹಾಗೂ ಮಧುರಾ ಆರ್.ಜೆ. ಅವರು ನಟಿಸಿದ್ದಾರೆ. ವಾತ್ಸಲ್ಯ, ಶಿವಾನಂದ್, ಪೂರ್ವಿ, ಸುನಿತಾ ಅವರೂ ಕೂಡ ತೆರೆ ಹಂಚಿಕೊಂಡಿದ್ದಾರೆ. ಆಕಾಶ್ ಪರ್ವ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರಸಾದ್ ಕೊಳಂಬೆ ಹಾಗೂ ತಿರುಮಲೇಶ್ ಕೆದಿಲ ನಿರ್ಮಾಣ ನಿಯಂತ್ರಕರಾಗಿ ಸಹಕರಿಸಿದ್ದಾರೆ.
ಫೆ.12ಕ್ಕೆ ರಿಲೀಸ್
ಈ ಟೆಲಿಚಿತ್ರವೂ ಪ್ರೇಮಿಗಳ ದಿನದ ಎರಡು ದಿನ ಮುಂಚಿತವಾಗಿ ಅಂದರೆ 2021ರ ಫೆಬ್ರವರಿ 12ಕ್ಕೆ ವಿ4 ಸ್ಟ್ರೀಮ್ ಒಟಿಟಿ ಫ್ಲ್ಯಾಟ್ಫಾರಂನಲ್ಲಿ ಬಿಡುಗಡೆಗೊಳ್ಳಲಿದೆ.
ಹಿರಿಯ ನಟ ಪ್ರಕಾಶ್ ತುಮ್ಮಿನಾಡು ಅವರು ಚಿತ್ರದ ಬಿಡುಗಡೆಯ ದಿನಾಂಕವನ್ನು ಭಾನುವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಅನಾವರಣಗೊಳಿಸಿದರು.
ವಿ4 ಸ್ಟ್ರೀಮ್ ಡೌನ್ಲೋಡ್ ಮಾಡಿ ಚಿತ್ರವನ್ನು ವೀಕ್ಷಿಸಬಹುದು ಎಂದು ಚಿತ್ರ ತಂಡ ತಿಳಿಸಿದೆ.