ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ಸಂಸ್ಥೆಗೆ 2ನೇ ವರ್ಷದ ಸಂಭ್ರಮ
August 26, 2020, 11:05 AM

ಮೂಡುಬಿದರೆ(reporterkarnataka news): ಮಜಾಭಾರತ ಖ್ಯಾತಿಯ ಬಾಲನಟಿ ಆರಾಧನಾ ಭಟ್ ಸಾರಥ್ಯದಲ್ಲಿ ಹುಟ್ಟಿಕೊಂಡ ಆರದಿರಲಿ ಬದುಕು ಆರಾಧನಾ ಸಂಸ್ಥೆಯು ಇದೀಗ ಎರಡನೇ ವರ್ಷದ ಸಂಭ್ರಮದಲ್ಲಿದೆ.

ಬೆರಳೆಣಿಕೆಯ ಸದಸ್ಯರಿಂದ ಕಟ್ಟಲ್ಪಟ್ಟ ಸಮಾಜಮುಖಿ ಸಂಸ್ಥೆಯಾದ ಆರದಿರಲಿ ಬದುಕು ಇಂದು 70 ಮಂದಿ ಸದಸ್ಯರನ್ನು ಹೊಂದಿದೆ. ಹಲವು ಮಂದಿ ಅಶಕ್ತರಿಗೆ ಆಸರೆಯಾಗಿ ನಿಂತಿದೆ.

ಜನ ಸೇವೆಯೇ ಜನಾರ್ದನ ಸೇವೆ ಎಂಬ ಪರಿಕಲ್ಪನೆ ಎಳೆಯ ಅರಾಧನಾಳಲ್ಲಿ ಹುಟ್ಟಿದ್ದೇ ತಡ ಅದಕ್ಕೆ ಮೂರ್ತಸ್ವರೂಪ ನೀಡಲಾಯಿತು. ಶಾಲೆಯಲ್ಲಿ ತನ್ನ ಗೆಳತಿಯರ ಜತೆ ಕುಂಟಬಿಲ್ಲೆ ಆಟವಾಡಿ ಕಾಲ ಕಳೆಯಬೇಕಾದ ಈಕೆ ನಟನಾ ರಂಗಕ್ಕೆ ಧುಮುಕಿ ಬಿಟ್ಟಳು. ಇದರ ಜತೆಗೆ ಬಡವರ, ಅಶಕ್ತರ, ನಿರ್ಗತಿಕರ ಸೇವೆಗೆಂದೇ ತಂಡವನ್ನು ಕಟ್ಟಿದಳು.

ಇದೀಗ ಈ ಸಂಸ್ಥೆಯ 70 ಮಂದಿ ಸದಸ್ಯರು ಪ್ರತಿ ತಿಂಗಳು ಅನಾರೋಗ್ಯಪೀಡಿತ ರನ್ನು ಗುರುತಿಸಿ ಸಹಾಯ ನೀಡುತ್ತಾ ಬಂದಿದ್ದಾರೆ. ಹಾಗೆ ಸಂಸ್ಥೆಯುಲಾಕ್ ಡೌನ್ ಸಮಯದಲ್ಲಿ 180 ಕ್ಕಿಂತಲೂ ಅಧಿಕ ಮನೆಗಳಿಗೆ ಆಹಾರದ ಕಿಟ್ ವಿತರಿಸಿದೆ. ಇದರೊಂದಿಗೆ ಹಲವಾರು ಸಮಾಜಮುಖಿ ಸಹಾಯಗಳನ್ನು ಮಾಡುತ್ತಾ ಬಂದಿದೆ.

ಇವೆಲ್ಲದರ ಜತೆಗೆ ಕಲೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರತಿಭೆಗಳಿಗೋಸ್ಕರ ಪ್ರತಿ ದಿನ ವಾಯ್ಸ್ ಆಫ್ ಆರಾಧನಾ ಪೇಜ್ ನಲ್ಲಿ ಪ್ರತಿಭೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಹಲವಾರು ಗಾಯಕರ ನೇರ ಪ್ರಸಾರ ಕಾರ್ಯಕ್ರಮವನ್ನು 10 ಲಕ್ಷಕ್ಕಿಂತ ಲೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಳ್ಳಿಯ ಪ್ರತಿಭೆಗಳಿಗೆ ಪ್ರಾಧಾನ್ಯ ನೀಡಿ ಅವರ ಪ್ರತಿಭೆಯ ಅನಾವರಣ ಆಗಲಿದೆ. ವಾಯ್ಸ್ ಆಫ್ ಆರಾಧನಾ ಈ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರಿಗೂ ವೇದಿಕೆ ಕಲ್ಪಿಸಿದೆ. ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ವೇಷ ಸ್ಪರ್ಧೆ, ಗಣೇಶೋತ್ಸವ ಹೀಗೆ ಹಲವಾರು ಕಾರ್ಯಕ್ರಮ ವಾಯ್ಸ್ ಆಫ್ ಆರಾಧನಾದಲ್ಲಿ ನಡೆಸುತ್ತಾ ಬಂದಿದೆ.ಆರಾಧನಾ ಭಟ್ ಜತೆಗೆ ಪ್ರಸಾದ್ ಶೆಟ್ಟಿ, ಪದ್ಮಶ್ರೀ ಭಟ್, ಅಭಿಷೇಕ್ ಶೆಟ್ಟಿ ಐಕಳ, ನಾಗರಾಜ್ ಶೆಟ್ಟಿ ಅಂಬೂರಿ, ಶ್ರೀನಿವಾಸ ಬಜಪೆ, ರಾಜೇಶ್ ಬೆಂಗಳೂರು, ಕಿರಣ್ ಶೆಟ್ಟಿ ಈ ಸಂಸ್ಥೆಯಲ್ಲಿ ಪ್ರತಿದಿನ ಸಕ್ರಿಯವಾಗಿ ದುಡಿಯುತ್ತಿದ್ದಾರೆ.