ಇತ್ತೀಚಿನ ಸುದ್ದಿ
ಅಪಾಯಕಾರಿ ಪ್ರದೇಶದ ನಿವಾಸಿಗಳನ್ನು ಬಲಾತ್ಕಾರದಿಂದ ಎಬ್ಬಿಸಲು ಸಚಿವ ಆರ್. ಅಶೋಕ್ ಸೂಚನೆ
August 8, 2020, 1:05 PM

ಮಂಗಳೂರು(reporterkarnataka news): ಕೊಡಗಿನಲ್ಲಿ ನಡೆದ ದುರ್ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಪಾಯಕಾರಿ ಪ್ರದೇಶದ ನಿವಾಸಿಗಳು ಸ್ಥಳಾಂತರಕ್ಕೆ ಒಪ್ಪಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡಿ ಬಲಾತ್ಕಾರದಿಂದ ತೆರವುಗೊಳಿಸಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರವಾಹ ಪರಿಹಾರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೆರೆ ಪರಿಹಾರವಾಗಿ ಒಟ್ಟು 342 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 23 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಹೆಚ್ಚುವರಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ನೆರೆಯಿಂದ ಯಾವುದೇ ಮನೆಗೆ ಒಂದು ಇಂಚು ನೀರು ನುಗ್ಗಿದರು 10 ಸಾವಿರ ರೂ. ಪರಿಹಾರ ನೀಡಬೇಕು. ಕಾಳಜಿ ಕೇಂದ್ರ ಸೇರಿದವರಿಗೆ ಬರೇ ಅನ್ನ ಸಾಂಬಾರಿಗೆ ನೀಡಿದರೆ ಸಾಲದು ಜತೆಗೆ ಹಪ್ಪಳ, ಪಲ್ಯ ಸೇರಿದಂತೆ 5 ಬಗೆಯ ಖಾದ್ಯ ನೀಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಹಾಗೂ ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮುಂತಾದವರು ಉಪಸ್ಥಿತರಿದ್ದರು.