10:54 PM Tuesday19 - January 2021
ಬ್ರೇಕಿಂಗ್ ನ್ಯೂಸ್
ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ…

ಇತ್ತೀಚಿನ ಸುದ್ದಿ

ಅಕ್ಕು

October 31, 2020, 4:27 PM

  • ಅಶೋಕ್ ಕಲ್ಲಡ್ಕ

ಮೂರು ಸುತ್ತಲೂ ಆವರಿಸಿದ ಅಡಿಕೆ ಮರಗಳ ನಡುವೆ ಆ ಹಳೆ ಮಾದರಿಯ ಮಾಳಿಗೆ ಮನೆ ತಲೆ ಎತ್ತಿ ಸುತ್ತಲಿನ ಸಣ್ಣ ಗುಡಿಸಲುಗಳನ್ನು ಅಣಕಿಸುತ್ತಿತ್ತು. ಸ್ವಾತಿಯ ಪ್ರಥಮ ಧಾರೆಗೆ ಹದಗೊಂಡ ಮನೆಯ ಮುಂದಿನ ತೋಟ ಹಸಿರು ಬಟ್ಟೆಯನ್ನು ಹಾಸಿದಂತೆ ಕಂಗೊಳಿಸುತ್ತಿತ್ತು. ಸುತ್ತಲೂ ಬೆಟ್ಟಗಳಿಂದ ಕೂಡಿದ ಮಲೆನಾಡಿನಲ್ಲಿ ಬೆಳಗಿನ ಸೂರ್ಯ ರಶ್ಮಿ ಮೈಗೆ ಹಿತ ನೀಡುವುದರಿಂದಲೇ ನಾನು ಮನೆಯ ಮುಂದಿನ ತೆರೆದ ಫೋರ್ಟಿಕೊದಲ್ಲಿ ಇಸಿಚೆಯರ್ ಹಾಕಿ ಕುಳಿತು ಓದುತ್ತಿದ್ದೆ. ಆಗ ತಾನೆ ಸ್ನಾನ ಪೂರೈಸಿದ್ದರಿಂದಲೋ ಏನೋ ಆ ಹೊಂಗಿರಣಗಳು ಮನಸ್ಸಿಗೆ ಮುದ ನೀಡುತ್ತಿತ್ತು. ಹಕ್ಕಿಗಳ ಕಲರವ ನನ್ನ ಗಮನವನ್ನು ಬೇರೆ ಕಡೆಗೆ ಸೆಳೆಯಲು ಯತ್ನಿಸಿದರೂ, ನೋಟ ಮಾತ್ರ ಯಾಂತ್ರಿಕವಾಗಿ ಪುಸ್ತಕದ ಮೇಲೆಯೇ ಇತ್ತು!


‘ ಅಕ್ಕಾ… ‘ ಎಂಬ ಕೂಗಿಗೆ ಪುಸ್ತಕದಿಂದ ನೋಟ ಬದಲಾಯಿಸಿ ಸ್ವರ ಬಂದ ಕಡೆಯತ್ತ  ದೃಷ್ಟಿ ಹರಿಸಿದೆ. ಫೋರ್ಟಿಕೊದ ಬಾಗಿಲ ಬಳಿಯಲ್ಲಿ ಹದಿನೈದು ಹದಿನಾರರ ಬಾಲೆಯೊಬ್ಬಳು ಕೈಯಲ್ಲಿ ಲೋಟ ಹಿಡಿದು ನಿಂತಿದ್ದಳು. ಗುಂಡು ಗುಂಡಗಿನ ಆಕೆ ಹದವಾದ ಎತ್ತರ, ದಪ್ಪ ಹೊಂದಿದ್ದಳು. ಬೆಳ್ಳಗಿನ ಮೈ ಬಣ್ಣ, ಹಿತವಾದ ಮೂಗು, ಕಪ್ಪು ಕಣ್ಣುಗಳು ನಕ್ಷತ್ರಗಳ ಹಾಗೆ ಮಿನುಗುತ್ತಿದ್ದವು. ಒಟ್ಟಿನಲ್ಲಿ ಸ್ವಪ್ನ ಸುಂದರಿ.

ಲೋಟ ನೋಡಿ ಹಾಲಿಗಿರಬೇಕೆಂದು ಅಂದುಕೊಂಡ ನಾನು ಆಕೆಯ ಚೆಲುವನ್ನು ಅಸ್ವಾದಿಸುವುದರಲ್ಲಿ  ‘ಏನು ಬೇಕಿತ್ತು..?’ ಎಂದು ಕೇಳುವಾಗ ಕೆಲವು ನಿಮಿಷಗಳೇ ಕಳೆದಿತ್ತು.

‘ಅಕ್ಕಾ ಇಲ್ವಾ?’  ಆಕೆ ಮರು ಪ್ರಶ್ನೆ ಹಾಕಿದಳು.

‘ ಇಲ್ಲ, ತೋಟದ ಕಡೆಗೆ ಹೋದ್ಲು’ ಅಂದೆ.

‘ ನನಗೆ ಸ್ವಲ್ಪ ಸಕ್ಕರೆ ಬೇಕಿತ್ತು.’ ಕಾಲ ಬೆರಳನ್ನು ನೆಲಕ್ಕೆ ಉಜ್ಜುತ್ತಾ ನಾಚಿಕೆಯಿಂದ ಕೇಳಿದ್ಲು.

 ಅತ್ತೆ ಸ್ನಾನ ಮಾಡುತ್ತಿದ್ದುದರಿಂದ ನಾನೇ ಆಕೆಯ ಲೋಟ ಹಿಡಿದುಕೊಂಡು ಅಡುಗೆ ಮನೆಗೆ ಹೋಗಿ ಡಬ್ಬಗಳ ಸಾಲಿನಲ್ಲಿ ಸಕ್ಕರೆ ಡಬ್ಬ ಹುಡುಕುವಾಗ ಸುಮಾರು ಐದು ನಿಮಿಷ ಉರುಳಿತ್ತು.

‘ ಏನು ನಿನ್ನ ಹೆಸರು…? ‘ ಸಕ್ಕರೆ ತುಂಬಿದ ಲೋಟವನ್ನು ಅವಳ ಕೈಗೆ ನೀಡುತ್ತಾ ನಾನು ಕೇಳಿದೆ.

‘ಅಕ್ಷತಾ.. ಅಕ್ಕು…’  ಮುಖ ಕೆಂಪಗೆ ಮಾಡಿ ಅಂದ್ಲು.

‘ ಶಾಲೆಗೆ ಹೋಗುತ್ತೀಯಾ…?’

ನನ್ನ ಪ್ರಶ್ನೆಗೆ ಇಲ್ಲ ಎಂದು ತಲೆ ಅಲ್ಲಾಡಿಸಿದವಳು ‘ಏಳನೇ ತರಗತಿಯಲ್ಲಿ ಬಿಟ್ಟಿದ್ದೇನೆ’ ಅಂದ್ಲು.

ಕೇಳಿದ್ದಕ್ಕಿಂತ ಒಂದು ಹೆಚ್ಚಿಗೆ ಉತ್ತರ ದೊರಕಿರುವುದರಿಂದ ಮನಸ್ಸಿಗೆ ಖುಷಿಯಾಯಿತು. ಅಂದವಾದ ಆ ನೇತ್ರಗಳ ಜತೆ ಇನ್ನಷ್ಟು ಮಾತನಾಡಬೇಕನಿಸಿತು. ಅಷ್ಟರಲ್ಲಿ ಅತ್ತೆ ಬಾತ್ ರೂಮ್ ಚಿಳಕ ತೆಗೆಯುವ ಸಪ್ಪಳ ಕೇಳಿ ನಾನು ಮಾತನ್ನು ಅರ್ಧ ಕ್ಕೆ ನಿಲ್ಲಿಸಿದೆ.

‘ ನಾ… ಬರ್ ತೀನಿ’ ಅಂತ ಹೇಳಿ ಉದ್ದ ಲಂಗವನ್ನು ಪಾದದಿಂದ ಮೇಲೆತ್ತಿ ಗೆಜ್ಜೆ ಸದ್ದು ಮಾಡುತ್ತಾ ಹೊರಟು ಹೋದಳು. ಆಕರ್ಷಕವಾದ ನಡಿಗೆ, ಶಿಲಾಬಾಲಿಕೆ ಅಂದು ಕೊಂಡೆ.


ನಾಲ್ಕು ಬದಿಯಲ್ಲಿ ಕೋಟೆಯಂತೆ ಎದ್ದು ನಿಂತ ಬೆಟ್ಟಗಳು, ಬದಿಯಲ್ಲಿ ಇಳಿಜಾರಾದ ಕಂದಕ ಹಸಿರು ಚಿತ್ತಾರದಂತೆ ಕಾಣುತ್ತಿತ್ತು. ಮನೆಯ ಸುತ್ತಮುತ್ತಲಿನ ಗಿಡ, ಮರ, ಹೂವುಗಳು, ಹಕ್ಕಿಗಳ ಕಲರವ, ಕೋಗಿಲೆಗಳು ಮಧುರ ಇಂಚರ, ಜೀರುಂಡೆಗಳ ಝೇಂಕಾರ ಇವೆಲ್ಲ ಪಟ್ಟಣದಲ್ಲಿ ಹುಟ್ಟಿದ ನನ್ನನ್ನು ಮಾಯಾಲೋಕದತ್ತ ಒಯ್ಯುತ್ತಿತ್ತು. ಮಲೆನಾಡಿನಲ್ಲೂ ಸೌಂದರ್ಯದ ಗಣಿ ಇದೆ ಎಂಬುದು ಅಕ್ಕುವನ್ನು ನೋಡಿದ ನಂತರ ನನಗೆ ಹೆಚ್ಚು ಸ್ವಷ್ಟವಾಯಿತು.


‘ಏಳು ಮರಿ, ಗಂಜಿ ಊಟ ಮಾಡುವಿಯಂತೆ’ ಅಕ್ಕನ ಸ್ವರಕ್ಕೆ ನಾನು ವಾಸ್ತವ ಲೋಕಕ್ಕೆ ಬಂದೆ.

ಹಳ್ಳಿಗಳಲ್ಲಿ ಬೆಳಗ್ಗೆ ಕಾಫಿ ಜತೆ ಎಷ್ಟೇ ತಿಂಡಿ ತಿಂದರೂ,  10 ಗಂಟೆಗೆ ದನದ ತುಪ್ಪ ಹಾಕಿ ಪಲ್ಯ ಹಾಗೂ ಮಾವಿನ ಮಿಡಿ ಉಪ್ಪಿನ ಕಾಯಿಯಲ್ಲಿ ಬಿಸಿ ಬಿಸಿ ಗಂಜಿ ಊಟ ಮಾಡುವ ಗಮ್ಮತ್ತೇ ಬೇರೆ.

‘ ಅಕ್ಕಾ …ಒಬ್ಳು ಹುಡ್ಗಿ ಬಂದ್ಲು. ಅಕ್ಷತಾ ಅಂತೆ. ಸಕ್ಕರೆ ತೆಕೊಂಡು ಹೋದ್ಲು. ತುಂಬಾ ಚೆನ್ನಾಗಿದ್ದಾಳಲ್ಲಕ್ಕ…?’ ಗಂಜಿ ಬಾಯಿಗೆ ಇಡುತ್ತಿದ್ದಂತೆ ನಾನು ಅಕ್ಕನಲ್ಲಿ ಹೇಳಿದೆ.

‘ ಏನು..ಹಳ್ಳಿ ಹುಡ್ಗಿಯರು ಅಂದವಾಗಿ ಕಾಣಲು ಶುರುವಾಯಿತು?  ಹದಿನಾರು ತುಂಬುವಾಗ ಕತ್ತೆನೂ ಅಂದವಾಗಿ ಕಾಣುತ್ತದೆ. ಹಾಗಿರುವಾಗ ಮೊದಲೇ ಚೆಲುವೆಯಾಗಿರುವ ಅಕ್ಕು ಸುಂದರವಾಗಿ ಕಾಣುವುದು ಏನು ಮಹಾ..? ಆದರೆ ಆ ಹುಡ್ಗಿಗೆ..’ ಅಕ್ಕ ಮಾತನ್ನು ಅರ್ಧ ಕ್ಕೆ ನಿಲ್ಲಿಸಿದಳು.

‘ ಏನಾಯಿತು ಆ ಹುಡ್ಗಿಗೆ? ‘ ನಾನು ಬಾಯಿಗೆ ಇಡಲು ತೆಗೆದ ಗಂಜಿಯನ್ನು ಅರ್ಧದಲ್ಲೇ ನಿಲ್ಲಿಸಿ ಕುತೂಹಲದಿಂದ ಕೇಳಿದೆ.

‘ ಹಾಗೇನೂ ಆಗಿಲ್ಲ, ಚೆನ್ನಾಗಿಯೇ ಇದ್ದಾಳೆ. ಆದರೆ ಮಲೆನಾಡಿನಲ್ಲಿ ಭೂತ, ಪ್ರೇತ, ದೆವ್ವ ಇವೆಲ್ಲ ಸ್ವಲ್ಪ ಜಾಸ್ತಿ ಕಣೋ. ಅವಳಿಗೆ ಮೈ ಮೇಲೆ ದೇವಿ ಬರುತ್ತದೆಯಂತೆ. ಕೋಳಿ, ಮೀನು ಸಖತ್ ತಿನ್ನುತ್ತಿದ್ದ ಆಕೆ ಕಳೆದ ಆರು ತಿಂಗಳಿನಿಂದ ಅದನ್ನೆಲ್ಲ ಮುಟ್ಟುತ್ತಿಲ್ಲ. ಶುದ್ಧ ಸಸ್ಯಾಹಾರಿ ಆಗಿದ್ದಾಳೆ’.

‘ ಏನು…? ದೇವಿ..? ನೀನು ಕೂಡ ಅದನ್ನೆಲ್ಲ ನಂಬ್ ತ್ತೀಯ ಅಕ್ಕ? ನೀನು ಕಲಿತ ಬಿಎಸ್ಸಿ ಡಿಗ್ರಿ ಮಲೆನಾಡು ಸೇರಿ ವರ್ಷದೊಳಗೆ ಹಾಳಾಯಿತಲ್ಲ’ ನಾನು ಬೇಸರದಿಂದ ಹೇಳಿದೆ.

‘ ಏನಪ್ಪ….ನಾನೇನು ನಂಬುವುದಿಲ್ಲ. ಆದರೆ ಮೊನ್ನೆ ನಾನೇ ಅಕ್ಕುವಿಗೆ ಮೈ ಮೇಲೆ ಬರುವುದನ್ನು ಕಂಡೆ’ ಅಕ್ಕ ಅಂದ್ಲು.

ನಾನು ಮೌನವಾಗಿ ಗಂಜಿ ಊಟ ಮುಗಿಸಿದೆ.


ಭೂತ, ಪ್ರೇತ, ದೈವ, ದೇವಿ ಇವೆಲ್ಲ ಮೈಯಲ್ಲಿ ಬರುತ್ತದೆ ಎನ್ನುವುದನ್ನು ನಮ್ಮ ಮನೆಯಲ್ಲಿ ಯಾರೂ ನಂಬುತ್ತಿರಲಿಲ್ಲ. ಮೈ ಮೇಲೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ರೋಗಿಯಾಗಿರುತ್ತಾನೆ ಎಂಬುದನ್ನು ಎಲ್ಲೋ ಓದಿದ ನೆನಪು ಇನ್ನೂ ಹಸನಾಗಿದೆ. ಅಕ್ಕು ತರಹದ ಚಿನ್ನದ ಗುಬ್ಬಿಯ ಮೇಲೆ ಮೈ ಬರುವುದನ್ನು ಕಣ್ಣಾರೆ ಕಾಣಬೇಕು ಎಂದು ನಿಶ್ಚಯಿಸಿಕೊಂಡೆ.


ಪಶ್ಚಿಮ ದಿಗಂತದಲ್ಲಿ ದಿನಮಣಿ ವಸುಂಧರೆಯ ಗರ್ಭದೊಳಗೆ ಪ್ರವೇಶಿಸಲು ತವಕಿಸುತ್ತಿದ್ದ. ನಾನು ಪಕ್ಕದ್ಮನೆ ಮಕ್ಕಳೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದೆ. ಸಂಜೆಯ ಹೊತ್ತು ಕಥೆ ಪುಸ್ತಕ ಓದಲು ಬಂದ ಅಕ್ಕು ನಮ್ಮೊಂದಿಗೆ ಸೇರಿಕೊಂಡಳು.

ಪಾದದಿಂದ ಮೇಲೆತ್ತಿದ ಲಂಗ ಕೆಳಗೆ ಕಾಣುವ ಬೆಳ್ಳಗಿನ ಪುಟ್ಟ ಪಾದ ಕುಂಟಬಿಲ್ಲೆಯೊಂದಿಗೆ ಹಾರುತ್ತಾ ಗೆಜ್ಜೆಯ ನಾದ ಹೊರಡಿಸುತ್ತಿತ್ತು. ಅಕ್ಕ ಹೇಳಿದ್ದು ನೆನಪಾಯಿತು. ಅಕ್ಕು ಮೈ ಮೇಲೆ ದೇವಿ ಬರುವುದು. ಅಕ್ಕುವನ್ನು ಕಾಣುವಾಗ ಆಕೆ ಮನೋರೋಗಿ ಹಾಗೆ ನನಗೆ ಅನಿಸಲಿಲ್ಲ. ಆದರೆ, ಯಾವ ಹುತ್ತದೊಳಗೆ ಯಾವ ಹಾವಿದೆ…? ಹೇಗೆ ಹೇಳುವುದು? ಅಕ್ಕು ಮೈ ಮೇಲೆ ದೇವಿ ಬರುವ ಹಿನ್ನೆಲೆಯನ್ನು ಬೇಧಿಸಲು ಅವಳ ಮನೆ ಪರಿಸರ ನೋಡಬೇಕೆನಿಸಿತು. ಅಕ್ಕು ಜತೆ ಅವಳ ಮನೆ ಕಡೆಗೆ ಹೆಜ್ಜೆ ಹಾಕತೊಡಗಿದೆ.


ಪಿಟಿ ಪಿಟಿ ಮಳೆ ಶುರುವಾಯಿತು. ತಲೆಗೆ ಟವೆಲ್ ಹಾಕಿಕೊಂಡು ನಡೆಯಲಾರಂಭಿಸಿದೆವು. ಅಕ್ಕು

ಮನೆ ಅಷ್ಟೇನೂ ದೂರವಿಲ್ಲ. ಕೇವಲ ಹತ್ತು ನಿಮಿಷಗಳ ದಾರಿ.

ಭಾವ ಆ ಹಳ್ಳಿಯ ಗಣ್ಯ ವ್ಯಕ್ತಿಯಾಗಿರುವುದರಿಂದ ಅಕ್ಕು ಮನೆಯಲ್ಲಿ ನನಗೆ ಭವ್ಯ ಸ್ವಾಗತವೇ ಸಿಕ್ಕಿತು. ಅಕ್ಕು ಅಪ್ಪ ಎಳನೀರು ತಂದು ಕೊಟ್ಟರು. ಮಳೆಗೆ ಎಳನೀರು ಹಿತ ಅನಿಸದಿದ್ದದರೂ ಅನಿವಾರ್ಯವಾಗಿ ಕುಡಿದೆ. 

ಚಿಕ್ಕ ಮನೆ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಹೊಲ ಗದ್ದೆ. ಇಬ್ಬರೇ ಮಕ್ಕಳು. ತಮ್ಮ ಗಿರೀಶ ಐದನೇ ತರಗತಿಯ ಹುಡುಗ.

ಅಕ್ಕುನ ಅಪ್ಪ-ಅಮ್ಮ ಅವಿದ್ಯಾವಂತರಾದರೂ ತಿಳಿವಳಿಕೆಯುಳ್ಳ ಜನ. ನೆಮ್ಮದಿಯ ಜೀವನ. ಅಕ್ಕುವಿನ ಮೈ ಮೇಲೆ ಬರುವ ಹಿನ್ನೆಲೆಯನ್ನು ಬೇಧಿಸುವುದು ಅಷ್ಟು ಸುಲಭದ ಮಾತಲ್ಲ ಅಂತ ನನಗನಿಸಿತು. ಅದಕ್ಕೆ ಗಿರಿಯ ನೆರವು ಪಡೆಯಲು ಆತನ ಸ್ನೇಹ ಸಂಪಾದಿಸಿಕೊಂಡೆ.

‘ ನಿನ್ನ ಅಕ್ಕ ಅಕ್ಷತಾಳ ಮೈ ಮೇಲೆ ಬರುವಾಗ ನನಗೆ ತಿಳಿಸು’ ಎಂದು ಗುಟ್ಟಾಗಿ ಗಿರಿಗೆ ಹೇಳಿ ಮನೆಯತ್ತ ಹೊರಟೆ. ರಹಸ್ಯ ಬೇಧಿಸದೆ ಮಂದಾರ ಹಳ್ಳಿಯಿಂದ ಕಾಲು ತೆಗೆಯಲಾರೆ ಎಂದು ಮನಸ್ಸಿನಲ್ಲೇ ಶಪಥ ಮಾಡಿಕೊಂಡೆ.


ಅಂದು ಮಂಗಳವಾರ. ಮುಂಜಾನೆಯಿಂದಲೇ ಒಂದೇ ಸವನೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಮಲೆನಾಡಿನ ಮಳೆಯೇ ಹಾಗೆ, ಒಮ್ಮೆ ಶುರುವಾದರೆ ಬಿಡಲು ಗೊತ್ತಿಲ್ಲ. ಬೆಳಗ್ಗಿನಿಂದ ಅಕ್ಕು ಕೂಡ ನಮ್ಮ ಮನೆಯತ್ತ ಕಾಲು ಹಾಕಲಿಲ್ಲ. ಮಳೆಯ ಕಾರಣ ಇರಬಹುದೇ? ಮನಸ್ಸಿನಲ್ಲೇ ಪ್ರಶ್ನಿಸಿಕೊಂಡೆ. ಅಕ್ಕನಲ್ಲಿ ಕೇಳಲು ಏನೋ ಮುಜುಗರ. ಚಡಪಡಿಸುತ್ತಲೇ ಸಮಯ ಕಳೆದು ಹೋಯಿತು.

ರಾತ್ರಿ ಸುಮಾರು ಏಳು ಗಂಟೆ ಇರಬಹುದು. ಅರೆಗತ್ತಲು ಆಗಲೇ ಆವರಿಸಿತ್ತು. ಮಳೆ ನಿಂತಿತ್ತು. ಮನೆಯ ಎದುರುಗಡೆ ತೋಟ ಕಡೆಯಿಂದ ಗಿರಿ ದೆವ್ವ ಹಿಡಿದವನಂತೆ ಓಡಿ ಬರುವುದು ಕಾಣಿಸಿತು. ಅವನು ನಮ್ಮ ಮನೆಯತ್ತ ಬರುವುದಕ್ಕೆ ಮುನ್ನವೇ ನಾನು ಪಂಚೆ ಎತ್ತಿಕಟ್ಟಿ ಅಂಗಳಕ್ಕೆ ಹಾರಿ ಗಿರಿಯತ್ತ ಓಡಲಾರಂಭಿಸಿದೆ. ದಿಕ್ಕು ಬದಲಾಯಿಸಿದ ಗಿರಿ ನನ್ನೊಂದಿಗೆ ಓಡಲಾರಂಭಿಸಿದ.

ಮಾರಿ ಓಡಿಸುವವರ ಹಾಗೆ ಒಂದೇ ಸಮನೆ ಓಡುತ್ತಿದ್ದ ನಾವು ಬ್ರೇಕ್ ಹಾಕಿದ್ದು ಅಕ್ಕು ಮನೆಯಂಗಳದಲ್ಲಿ. ಓಡುವ ರಭಸಕ್ಕೆ ಮುಳ್ಳು ಪರಚಿರುವುದರಿಂದ ನನ್ನ ಎರಡೂ ಕಾಲುಗಳಲ್ಲಿ ರಕ್ತ ಜಿನುಗುತ್ತಿತ್ತು. 


ಅಕ್ಕು ನಡು ಚಾವಡಿಯಲ್ಲಿ ದುರ್ಗೆ ತರಹ ತಲೆಗೂದಲು ಬಿಚ್ಚಿ ಹಲ್ಲು ಕಡಿಯುತ್ತಿದ್ದಳು. ಕಣ್ಣು ತಿರುಗುತ್ತಿತ್ತು. ಅವಳ ತಾಯಿ ಕೈಯಲ್ಲಿ ನೀರಿನ ತಂಬಿಗೆ ಹಿಡಿದು ನಿಂತಿದ್ದರು.

‘ ನಾನು ದೇವಿ… ಈ ಊರಿನ ಕಾಳಿ… ನನ್ನ ಅಶುದ್ದಗೊಳಿಸಿದ್ದೀರಿ. ನನಗೆ ಅವಮಾನ ಮಾಡಿದ್ದೀರಿ. ಹೊಲಸು ತಿನ್ನುತ್ತೀರಿ. ಮೀನು- ಮಾಂಸ ತಿನ್ನಬಾರದು. ಇದು ದೇವಿಯ ಅಪ್ಪಣೆ. ಶುದ್ಧವಾಗಿ ನನಗೆ ಪೂಜೆ ಮಾಡಿ’ ಅಕ್ಕು ಕಣ್ಣು ತಿರುಗಿಸುತ್ತಾ ವಿಕಾರವಾಗಿ ಕಿರುಚತೊಡಗಿದ ಅಕ್ಕು ನೆಲದ ಮೇಲೆ ಬಿದ್ದು ಹೊರಳಾಡಿದಳು. ಅರ್ಧ ಗಂಟೆಯ ಬಳಿಕ ಎಲ್ಲವೂ ಮುಗಿದು ಹೋಯಿತು. ನಾನು ಮೆಲ್ಲಗೆ ಮನೆ ಕಡೆ ಹೊರಟೆ. ಹೊರಗಡೆ ಅಕ್ಕ ಮತ್ತು ಅತ್ತೆ ಇಬ್ಬರು ಕೆಲಸದಾಳುಗಳ ಜತೆ ನನ್ನನ್ನು ಕಾಯುತ್ತಿದ್ದರು.


ತೋಟದೊಳಗೆ ದಟ್ಟ ಕತ್ತಲೆ ಆವರಿಸಿತ್ತು. ಇಬ್ಬರು ಕೆಲಸದಾಳುಗಳಲ್ಲಿ ಒಬ್ಬಾತ ಎದುರುಗಡೆಯಿಂದ ಟಾರ್ಚ್ ಬೆಳಕು ಬೀರುತ್ತಾ, ಇನ್ನೊಬ್ಬಾತ ಹಿಂದುಗಡೆಯಿಂದ ಬೆಳಕು ಬೀರುತ್ತಾ ಬರುತ್ತಿದ್ದರು. ಆದರೂ ಕೆಸರು ಗುಂಡಿ ಗೊತ್ತಾಗದೆ ಅಲ್ಲಲ್ಲಿ ಪಾದ ಹೂತು ಹೋಗುತ್ತಿತ್ತು. ಅಕ್ಕುವಿಗೆ ಸಸ್ಯಾಹಾರದ ಪ್ರಭಾವ ಬಿದ್ದಿರಬೇಕು. ದೇವಿ ಬರುವುದು ನಟನೆ ಮಾತ್ರ ಎಂದು ನನಗನಿಸಿತು. ಯಾವುದಕ್ಕೂ ರಹಸ್ಯವನ್ನು ಬಯಲು ಮಾಡಿಯೇ ಮಾಡುತ್ತೇನೆ ಎಂದು ಮಗದೊಮ್ಮೆ ಪ್ರತಿಜ್ಞೆ ಮಾಡಿಕೊಂಡೆ.


ಸಂಜೆಯ ಹೊಂಗಿರಣ ಮರಗಳ ನಡುವೆ ತೂರಿ ಮನೆಯಂಗಳದಲ್ಲಿ ನೆರಳಿನ ಚಿತ್ತಾರವನ್ನು ಬಿಡಿಸಿತ್ತು. ಬೆಳಗ್ಗಿನಿಂದಲೇ ಒಳ್ಳೆಯ ಬಿಸಿಲಿತ್ತು. ಸಂಜೆಯ ಟೀ ಪೂರೈಸಿದ ನಾನು ಅಕ್ಕನಿಗೆ ಹೇಳಿ ಹೊಳೆ ದಂಡೆಯತ್ತ ಹೊರಟೆ. ಗಿಡ ಮರಗಳು ಹಸಿರು ಹಸಿರಾಗಿ ಕಂಗೊಳಿಸುತ್ತಿತ್ತು. ಚಿಕ್ಕದಾದ ತೊರೆಗಳು ಜುಳು ಜುಳು ನಾದದೊಂದಿಗೆ ಹರಿಯುತ್ತಿತ್ತು. ಹಕ್ಕಿಗಳ ಕಲರವ ಪರಿಸರದ ನಿಶಬ್ದತೆಯನ್ನು ಆಗಾಗ ಕೆಡಿಸುತ್ತಿತ್ತು. ಅಕ್ಕು ಒಂಟಿಯಾಗಿ ಹೊಳೆ ದಂಡೆಯಲ್ಲಿ ಕುಳಿತಿರುವುದು ಕಾಣಿಸಿತು. ಮಾತನಾಡಲು ಒಳ್ಳೆಯ ಅವಕಾಶ, ಒಂಟಿಯಾಗಿದ್ದಾಳೆ. ಮನಸ್ಸಿನಲ್ಲೇ ಹಿಗ್ಗಿಕೊಂಡೆ.

ತೊರೆಯ ಬದಿಯ ಕಲ್ಲಿನಲ್ಲಿ ಕುಳಿತ ನಾನು ಚಿಕ್ಕ ಚಿಕ್ಕ ಕಲ್ಲುಗಳನ್ನು ನೀರಿಗೆ ಎಸೆಯುತ್ತಾ ಆಕೆ ಜತೆ ಮಾತಿಗೆ ಆರಂಭಿಸಿದೆ.

ನೀರಿನಲ್ಲಿ ಬಂಗಾರ ಬಣ್ಣದ ಪುಟ್ಟ ಪುಟ್ಟ ಮೀನುಗಳು ನಿರ್ದಿಷ್ಟ ಪಥವಿಲ್ಲದೆ ಕ್ಷುದ್ರ ಗ್ರಹಗಳಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದವು.

‘ ಈ ಮೀನುಗಳು ಎಷ್ಟು ಚೆನ್ನಾಗಿದೆ ಅಲ್ವಾ..? ನಾನು ಅಕ್ಕುನಲ್ಲಿ ಹೇಳಿದೆ.

ಮೀನಿನ ಹೆಸರೆತ್ತುವಾಗ ಮುಖ ಸಿಂಡರಿಸಿಕೊಂಡ ಅಕ್ಕು ವಾಕರಿಕೆ ಬರುವ ಹಾಗೆ ಮಾಡಿದಳು. ಚಿನ್ನದಂತಹ ಆ ಮೀನಿನ ಸೌಂದರ್ಯವನ್ನು ಯಾರು ಕೂಡ ಮೆಚ್ಚುವುದರಲ್ಲಿ ಸಂಶಯವಿಲ್ಲ. ಆದರೆ ಈ ಮೀನು ಮಾಂಸ ತಿನ್ನುವ ಹುಡ್ಗಿ ಅದರ ಸೌಂದರ್ಯ ವನ್ನು ದ್ವೇಷಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಇಲ್ಲೇ ಏನೋ ರಹಸ್ಯ ಅಡಗಿರಬೇಕು ಅಂದುಕೊಂಡೆ.

‘ ನೀನು ಮೀನು ತಿನ್ವೊಲ್ವ…? ಆಕೆಯಲ್ಲಿ ಕೇಳಿದೆ.

‘ ಥೂ… ವಾಸನೆ, ನಾನು ತಿನ್ನೊಲ್ಲ ‘

‘ ನಿನ್ನ ಮನೆಯವರು ತಿನ್ನೊಲ್ವ..?’ ನಾನು ಕೇಳಿದೆ.

‘ ಅವರು ತಿನ್ತಾರೆ. ನಾನು ಮಾತ್ರ ತಿನ್ನೊಲ್ಲ.’ ಅಕ್ಕುನಿಂದ ಉತ್ತರ ಬಂತು.

ನಾನು ವಿಷಯ ಬದಲಾಯಿಸಿ ಮರ ಗಿಡಗಳ ಬಗ್ಗೆ ಮಾತನಾಡಲಾರಂಭಿಸಿದೆ. ಹಾಗೆ ಸುಮಾರು ಅರ್ಧ ಗಂಟೆ ಕಳೆದಿರಬಹುದು.

‘ ನೀವು ಹೋಗಿ, ನನ್ನ ಅಮ್ಮ ಬರೋ ಸಮಯ ಆಯಿತು.’ ಅಕ್ಕು ನನ್ನಲ್ಲಿ ಹೇಳಿದ್ಲು.

ನಾನು ಎದ್ದು ನಿಂತೆ. ಆದರೆ ಮನೆಗೆ ಹಿಂತಿರುಗಲು ಮನಸು ಕೇಳಿಲ್ಲ. ಅಕ್ಕು ಏನೋ ಸುಳ್ಳು ಹೇಳುತ್ತಿದ್ದಾಳೆ ಅಂತ ಅನಿಸಿತು. ಅವಳ ಹೃದಯದಲ್ಲಿ ಏನೋ ಅಡಗಿರುವುದು ನನಗೆ ಸ್ವಷ್ಟವಾಯಿತು. ಅಕ್ಕುವಿಗೆ ಗೊತ್ತಾಗದ ಹಾಗೆ ಅಲ್ಲೇ ಮರದ ಮರೆಯಲ್ಲಿ ಕುಳಿತು ಯೋಚಿಸತೊಡಗಿದೆ.


ನಗು ಕೇಳಿ ನಾನು ಮತ್ತೆ ವಾಸ್ತವ ಲೋಕಕ್ಕೆ ಬಂದೆ. ಆಗಲೇ ಅರೆಗತ್ತಲು ಆವರಿಸಿತ್ತು. ತರುಣನೊಬ್ಬ ಅಕ್ಕುವನ್ನು ಅಪ್ಪಿ ಮುದ್ದಾಡುತ್ತಿದ್ದ. ನನ್ನ ಹೃದಯದಲ್ಲಿ ಜ್ವಾಲಾಮುಖಿಯೇ ಸ್ಫೋಟಿಸಿದಂತಾಯಿತು. ಸಾವಿರ ನಗಾರಿಗಳು ಒಮ್ಮೆಲೇ ಬಾರಿಸಿದಂತಾಯಿತು. ಹೊಟ್ಟೆ ಯೊಳಗೆ ಚೇಳುಗಳು ಹರಿದಾಡಿದಂತಾಯಿತು. ನಾನು ಪ್ರೀತಿಸುತ್ತಿದ್ದ ಅಕ್ಕು ಇನ್ನೊಬ್ಬನ ಬಾಹು ಬಂಧನದಲ್ಲಿ. ನನಗೆ ಅದನ್ನು ಊಹಿಸುವುದೇ ಕಷ್ಟವಾಯಿತು. ಕಣ್ಣು ಮತ್ತೆ ಉಜ್ಜಿಕೊಂಡು ನೋಡ ತೊಡಗಿದೆ. ಹುಡುಗ ಅಕ್ಕುವಿಗೆ ಬಳೆ ತೊಡಿಸುತ್ತಿದ್ದ. ಅವನೇ ಅರ್ಚಕ ಶಾಸ್ತ್ರಿಗಳ ಮಗ ಶಂಕರ!

ಅಕ್ಕು ನನಗೆ ಸಿಗದಿದ್ದರೂ ನನಗೆ ಮಹಾ ಸಂಶೋಧನೆ ಮಾಡಿದ ವಿಜ್ಞಾನಿ ತರಹ ಮಹಾದಾನಂದವಾಯಿತು. ನೀರಿನ ತೊಟ್ಟಿಯಿಂದ ಹಾರಿದ ಆರ್ಕಿಮಿಡಿಸ್ ತರಹ ಒಂದೇ ನೆಗೆತಕ್ಕೆ ಮನೆ ಕಡೆ ಓಡಲಾರಂಭಿಸಿದೆ.

ಮನೆಯಂಗಳದಲ್ಲಿದ್ದ ಅಕ್ಕನಲ್ಲಿ ಅಕ್ಕುವಿನ ಮೈ ಮೇಲೆ ದೇವಿ ಬರುವ ಕಾರಣ ವಿವರಿಸಿದೆ. ಅಕ್ಕ ಬಿದ್ದು ಬಿದ್ದು ನಗಲಾರಂಭಿಸಿದಳು. ದೂರದಲ್ಲಿ ಭಾವ ಮತ್ತು ಅತ್ತೆ ನಮ್ಮನ್ನು ನೋಡಿ ನಗುವುದು ಕಾಣಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು