ಇತ್ತೀಚಿನ ಸುದ್ದಿ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ಇನ್ನು 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿ
July 29, 2020, 5:51 PM

ನವದೆಹಲಿ(reporterkarnataka news):
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದ್ದು, ಇನ್ನು ಮುಂದೆ 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ್ದಾರೆ. ಸುಮಾರು 34 ವರ್ಷದ ಬಳಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಪ್ರಕಾರ ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್ಇಪಿಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
2015ರಿಂದ ಎನ್ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ.
ಎನ್ಇಪಿಯಲ್ಲಿ ಏನಿದೆ?: ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ 3 ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ 4 ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ.
ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್ಗಳನ್ನು ತೆಗೆದುಕೊಳ್ಳಬಹುದು. 5ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು.6ನೇ ತರಗತಿಯಿಂದಲೇ ಕೋಡಿಂಗ್ ಪಾಠವನ್ನು ಹೇಳಿಕೊಡಬೇಕು.