ಇತ್ತೀಚಿನ ಸುದ್ದಿ
ಕೊರೋನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಲೂಟಿ; ಯಾವುದೇ ಚಿಕಿತ್ಸೆ ಇಲ್ಲದೆ ಮೃತದೇಹಕ್ಕೆ 20 ಸಾವಿರ ಬಿಲ್ !
July 30, 2020, 2:27 PM

ಅನುಷ್ ಪಂಡಿತ್ ಮಂಗಳೂರು
Info.reporterkarnataka@gmail.com.
ಕೊರೊನಾ ಕರಿಛಾಯೆಯ ನಡುವೆ ಖಾಸಗಿ ಆಸ್ಪತ್ರೆಗಳ ಹಣ ಮಾಡುವ ಧಾವಂತ ಹಾಗೂ ಜಿಲ್ಲಾಡಳಿತದ ಅಸಹಾಯಕತೆಗೆ ಸಾಕ್ಷಿ ಎನ್ನುವಂತೆ ಕರಳು ಹಿಂಡುವ ಘಟನೆ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮೃತ ವ್ಯಕ್ತಿಯ ಸಂಬಂಧಿಕರನ್ನು ಸುಮಾರು 48 ತಾಸುಗಳ ಕಾಲ ಸತಾಯಿಸಿ ಬಳಿಕ ಮೃತದೇಹವನ್ನು ಬಿಟ್ಟುಕೊಟ್ಟು 20 ಸಾವಿರ ಬಿಲ್ ನೀಡಿದ ಅಘಾತಕಾರಿ ಪ್ರಸಂಗ ನಡೆದಿದೆ.
ವೃತ್ತಿಯಲ್ಲಿನಾಡದೋಣಿಮೀನುಗಾರಿಕೆಮಾಡುತ್ತಿದ್ದ ಹೆಜಮಾಡಿಯ ಬಡ ಕುಟುಂಬಕ್ಕೆ ಸೇರಿದ 50ರ ಹರೆಯದ ಪ್ರಮೋದ್ ಸಾಲಿಯಾನ್ ಅವರಿಗೆ ಡೆಂಗೆ ಜ್ವರ ಬಾಧಿಸಿತ್ತು. ಪಡುಬಿದ್ರೆಯ ವೈದ್ಯರಿಂದ ಔಷಧ ಪಡೆದ ಅವರು ಬೈಕಂಪಾಡಿಯ ತನ್ನ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ಜ್ವರ ವಿಷಮ ಸ್ಥಿತಿಗೆ ತಲುಪಿರುವುದರಿಂದ ಸಾಲಿಯಾನ್ ಅವರನ್ನು ಜುಲೈ 28ರಂದು ಮಂಗಳೂರಿನ ಹಂಪನಕಟ್ಟೆ ಬಳಿಯ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಹಾಸಿಗೆಗಳು ಭರ್ತಿಯಾಗಿವೆ ಎಂದು ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. ಆಗಲೇ ತೀವ್ರ ಅಸ್ವಸ್ಥರಾಗಿ ಪ್ರಜ್ಞಾಶೂನ್ಯರಾಗಿದ್ದಸಾಲಿಯಾನ್ಅವರನ್ನು ಮಂಗಳೂರಿನ ಕುಂಟಿಕಾನ ಬಳಿಯ ಮತ್ತೊಂದು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ದಾಖಲಿಸಿಕೊಳ್ಳುವಷ್ಟರಲ್ಲಿ ಸಾಲಿಯಾನ್ ಸಾವನ್ನಪ್ಪಿದ್ದರು. ಅಲ್ಲಿಯ ವೈದ್ಯರು ಅದನ್ನು ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದರು.ಮೊದಲೇ ಕುಟುಂಬದ ಸದಸ್ಯನ ಸಾವಿನಿಂದ ಕಂಗಾಲಾದ ಸಂಬಂಧಿಕರ ಕರುಣಾಜನಕ ಕತೆ ಇಲ್ಲಿಂದಲೇ ಆರಂಭಗೊಂಡಿತು.
ಸಾಲಿಯಾನ್ಅವರುಆಸ್ಪತ್ರೆಗೆದಾಖಲಿಸುವಾಗಲೇ ಮೃತಪಟ್ಟಿದ್ದರೂ, ಮೃತದೇಹದ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿತು. ನಂತರ 24 ತಾಸು ಕಾಲ ವರದಿಯ ಕುರಿತು ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ ಶವಾಗಾರದ ಬಳಿ ಕಾಯಿಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಬಂದವರು ಡಿವೈಎಫ್ಐ ಸಂಘಟನೆಯ ನಾಯಕರು ಹಾಗೂಕಾರ್ಯಕರ್ತರು. ಸಂಘಟನೆಯ ಮೂಲಕ ಇದನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇದಾದ ಬಳಿಕ ಸಂಜೆ 6 ಗಂಟೆಗೆ ಕೋವಿಡ್ ಪಾಸಿಟಿವ್ ಎಂದು ವರದಿ ನೀಡಲಾಯಿತು. ಕೋವಿಡ್ ವರದಿ ಬಂದ ನಂತರವೂ ಅಂತ್ಯಕ್ರಿಯೆಯ ಕುರಿತು ಸರಿಯಾದ ಮಾಹಿತಿಯನ್ನು ಸಾಲಿಯಾನ್ ಸಂಬಂಧಿಕರಿಗೆ ಆಸ್ಪತ್ರೆ ನೀಡಲಿಲ್ಲ. ಇದರಿಂದ ಬಂಧು ಮಿತ್ರರು ರಾತ್ರಿ ಪೂರ್ತಿ ಆಸ್ಪತ್ರೆಯ ಮುಂದೆ ಕಣ್ಣೀರು ಇಡುವಂತಾಯಿತು. ಕೊನೆಗೆ ಜುಲೈ 29 ಬೆಳಗ್ಗೆ 8 .30ಕ್ಕೆ ಅಂತ್ಯಕ್ರಿಯೆ ನಡೆಸಲು ಕುಟುಂಬಕ್ಕೆ ತಿಳಿಸಲಾಯಿತು. ಆ ನಡುವೆ ಶವಾಗಾರದ ವೆಚ್ಚ ಎಂದು 2500 ರೂ. ಕುಟುಂಬಸ್ಥರಿಂದ ಪಡೆಯಲಾಯಿತು. ಈ ನಡುವೆ ಆಸ್ಪತ್ರೆ ಆಡಳಿತ ಮೃತದೇಹದ ಪರೀಕ್ಷೆ, ಕೋವಿಡ್ ಪರೀಕ್ಷೆ ಎಂದು 8500 ರೂಪಾಯಿ ಬಿಲ್ ಕೊಟ್ಟು ಪಾವತಿಸುವಂತೆ ಸಂಬಂಧಿಕರಿಗೆ ತಿಳಿಸಿತು. ಅಂತ್ಯಕ್ರಿಯೆಗೆ ಬೇಕಾದ ಕಿಟ್ ಗಳನ್ನು ಖರೀದಿಸುವಂತೆ ಸೂಚಿಸಿ ತಾಲೂಕು ಆಡಳಿತದ ಪ್ರತಿನಿಧಿಗಳು ಬಂದು ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲಿದ್ದಾರೆ ಎಂದಷ್ಟೆ ಮಾಹಿತಿ ನೀಡಿತು. ನಂತರ ಸತತ ಆರು ಗಂಟೆಗಳ ಕಾಲ ಜಿಲ್ಲಾಡಳಿತದ ಬೆನ್ನು ಹತ್ತಿದ ಬಳಿಕ ತಹಶೀಲ್ದಾರರನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಆದರೆ ಖರ್ಚುವೆಚ್ಚ ಯಾರು ಭರಿಸುವುದು ಎನ್ನುವ ಕುರಿತು ಸರಿಯಾದ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ. ಹಾಗೆ ಮಧ್ಯಾಹ್ನ ಕಳೆದರೂ ಅಂತ್ಯ ಸಂಸ್ಕಾರದ ಕುರಿತು ಮಾಹಿತಿ ನೀಡಲು ಯಾರೂ ಲಭ್ಯವಿರಲಿಲ್ಲ. ಸಾಲಿಯಾನ್ ಬಂಧುಗಳು ಆಸ್ಪತ್ರೆಯ ಶವಾಗಾರದ ಮುಂದೆ ಅಕ್ಷರಶ ಗತಿ ಇಲ್ಲದವರಂತೆ ನಿಂತು ಬಿಟ್ಟರು. ಡಿವೈಎಫ್ ಐ ಕಾರ್ಯಕರ್ತರು ಮತ್ತೆ ಅಧಿಕಾರಿಗಳ ಬೆನ್ನು ಹತ್ತಿದ ಮೇಲೆ ಶವ ಕೊಂಡೊಯ್ಯುವ ಆಂಬುಲೆನ್ಸ್ ಚಾಲಕನ ನಂಬರ್ ಮಾತ್ರ ತಹಶೀಲ್ದಾರ್ ಕಡೆಯಿಂದ ನೀಡಲಾಯಿತು.
ಎಲ್ಲಾ ಒದ್ದಾಟದ ನಂತರ ಸಂಜೆ ಆರು ಗಂಟೆಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ತಿಳಿಸಲಾಯಿತು. ಈ ನಡುವೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯವರು ಇನ್ನೇನು ಹೆಣ ಕೊಂಡೊಯ್ಯಲು ಆಂಬ್ಯುಲೆನ್ಸ್ ಬರುತ್ತದೆ. ಅದರ ಚಾಲಕ ಸಿಬ್ಬಂದಿಗಳಿಗೆ, ಹೆಣ ಸುಡುವವರಿಗೆ ಒಟ್ಟು 6 ಪಿಪಿಇ ಕಿಟ್ ಖರೀದಿಸಬೇಕಿದೆ. ತಲಾ 1,500 ರೂ. ನಂತೆ ಒಟ್ಟು 9 ಸಾವಿರ ರೂಪಾಯಿ ಪಾವತಿಸಿ ಎಂದು ಆದೇಶಿಸಿದರು.
ಒಂದು ಕಡೆ ಕುಟುಂಬದ ಸದಸ್ಯನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಬಡ ಕುಟುಂಬ ಜಿಲ್ಲಾಡಳಿತದ ಉಚಿತ ಚಿಕಿತ್ಸೆಯ ಮಾತು ನಂಬಿ ಖಾಸಗಿ ಮೆಡಿಕಲ್ ಕಾಲೇಜಿಗೆ ಕರೆದೊಯ್ದ ತಪ್ಪಿಗೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದ ಮೃತದೇಹಕ್ಕೆ ಸುಮಾರು 20 ಸಾವಿರ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಬೇಕಾಯಿತು.
ವಿಶೇಷವೆಂದರೆ 500- 600 ರೂಪಾಯಿ ಬಾಳುವ ಪಿಪಿಇ ಕಿಟ್ ಗಳನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯವರು 1,500 ರೂಪಾಯಿಯಂತೆ ಮಾರಾಟ ಮಾಡುವುದು, ಮೃತ ಪಟ್ಟವರ ಕಡೆಯವರಿಗೆ ಕಡ್ಡಾಯವಾಗಿ ಆರೇಳು ಕಿಟ್ ಖರೀದಿಸುವಂತೆ ಮಾಡುವುದು ಕೊರೊನಾ ಬೆಂಕಿಯಲ್ಲಿ ಸಿಗರೇಟ್ ಹಚ್ಚಿದಂತೆ ಎಂದು ಜನಸಾಮಾನ್ಯರು ಪ್ರತಿಕ್ರಿಯಿಸಿದ್ದಾರೆ.