ಇತ್ತೀಚಿನ ಸುದ್ದಿ
ಸಂಡೇ ಲಾಕ್ ಡೌನ್: ಮಂಗಳೂರಿನ ರಸ್ತೆಗಳು ಸಂಪೂರ್ಣ ಸ್ತಬ್ದ
July 26, 2020, 4:30 AM

ಮಂಗಳೂರು(reporterkarnataka news): ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಭಾನುವಾರ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದವು. ವಾಹನಗಳು ರಸ್ತೆಗೆ ಇಳಿಯಲಿಲ್ಲ. ಜನರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದರು.
ನಗರದ ಹಂಪನಕಟ್ಟೆ ಪ್ರದೇಶವನ್ನು ಪ್ರವೇಶಿಸುವ ಎಲ್ಲ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರು. ತರಕಾರಿ, ಮೀನು ಮಾರುಕಟ್ಟೆ ಬಂದ್ ಆಗಿದ್ದವು. ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ತಿರುಗಾಡುತ್ತಿರುವುದು ಬಿಟ್ಟರೆ ನಗರ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ನಗರದ ಪ್ರವೇಶಿಸುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ನಲ್ಲಿ ಮುಚ್ಚುವ ಮೂಲಕ ನಗರದಲ್ಲಿ ವಾಹನಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲಾಯಿತು.
ಸ್ಟೇಟ್ ಬ್ಯಾಂಕ್ ಪ್ರವೇಶಿಸುವ ಆರ್ ಟಿಒ ಕಚೇರಿ ಎದುರು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.

ವೈದ್ಯಕೀಯ ಹಾಗೂ ಇತರ ತುರ್ತು ಅಗತ್ಯಕ್ಕಾಗಿ ಸ್ವಂತ ವಾಹನಗಳ ಮೂಲಕ ಅಗಮಿಸಿದವರನ್ನು ಸರಿಯಾಗಿ ಪರಿಶೀಲನೆ ನಡೆಸಿ ಹೋಗಲು ಅನುಮತಿ ನೀಡಲಾಗುತ್ತಿತ್ತು. ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡ ವೆನ್ಲಾಕ್ ಪ್ರದೇಶದಲ್ಲಿ ನೀರವ ಮೌನ ನೆಲೆಸಿತ್ತು. ಭಾನುವಾರದ ದಿನ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಕವಚಿ ಹಾಕಿದ ಮೀನಿನ ಬುಟ್ಟಿಗಳು ಮಾತ್ರ ಕಂಡು ಬಂದವು.
ಟೌನ್ ಹಾಲ್ ಬಳಿ ಪ್ರತಿ ಭಾನುವಾರ ಸಂಡೇ ಬಜಾರ್ ನಡೆಯುವ ಪ್ರದೇಶ ಖಾಲಿ ಖಾಲಿಯಾಗಿತ್ತು.

ಸೆಂಟ್ರಲ್ ಮಾರ್ಕೆಟ್ ಪ್ರದೇಶ, ಉರ್ವ, ಕಾವೂರು, ಕಂಕನಾಡಿ, ಅಳಕೆ ಮಾರಕಟ್ಟೆಗಳು ಕೂಡ ಬಿಕೋ ಎನ್ನುತ್ತಿದ್ದವು.
ಪೊಲೀಸ್ ಗಸ್ತು ಜತೆ ಜಿಲ್ಲಾ ಆರೋಗ್ಯ ಇಲಾಖೆ, ಮಂಗಳೂರು ಮಹಾನಗರಪಾಲಿಕೆ ಆರೋಗ್ಯ ವಿಭಾಗದ ವಾಹನಗಳು , ಅಧಿಕಾರಿಗಳ ವಾಹನಗಳು ನಗರದಲ್ಲಿ ಓಡಾಟ ನಡೆಸುತ್ತಿದ್ದವು.
ಜಿಲ್ಲೆಯ ಇತರ ತಾಲೂಕುಗಳಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಯಿತು.