ಇತ್ತೀಚಿನ ಸುದ್ದಿ
ವೆನ್ಲಾಕ್, ಲೇಡಿಗೋಶನ್ ಗೆ ಬಂದಿಲ್ಲ: ಎಲ್ಲಿಗೆ ಹೋಯಿತು ಹೊಸ 200 ವೆಂಟಿಲೇಟರ್ ?
July 29, 2020, 2:56 AM

ರಾಜೀವಿಸುತ ಬೆಂಗಳೂರು
info.reporterkarnataka@gmail.com
ರಾಜ್ಯ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಸ್ಟೇಟ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿ(ಕೆಡಿಎಲ್ ಡಬ್ಲ್ಯು ಎಸ್) ನಡೆಸಿದೆ ಎನ್ನಲಾದ ಹಗರಣದ ವಾಸನೆ ದಿನ ಕಳೆದಂತೆ ದಟ್ಟವಾಗಲಾರಂಭಿಸಿದೆ. ದುಬಾರಿ ದರ ತೆತ್ತು ಖರೀದಿಸಿದ ವೆಂಟಿಲೇಟರ್ ಗಳನ್ನು ರಾಜ್ಯದ ಯಾವ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿ ಇದುವರೆಗೆ ದೊರಕಿಲ್ಲ. ಕೊರೊನಾ ಸೋಂಕು ಅತಿಯಾಗಿ ಹೆಚ್ಚುತ್ತಿರುವ ಕರಾವಳಿ ಜಿಲ್ಲೆಗಳ ಯಾವುದೇ ಸರಕಾರಿ ಆಸ್ಪತ್ರೆಗಳಿಗೂ ವೆಂಟಿಲೇಟರ್ ಬಂದಿಲ್ಲ.
ಕೆಡಿಎಲ್ ಡಬ್ಲ್ಯು ಎಸ್ 15.86 ಕೋಟಿ ರೂ. ವೆಚ್ಚದಲ್ಲಿ ಒಟ್ಟು 200 ವೆಂಟಿಲೇಟರ್ ಗಳನ್ನು ಖರೀದಿಸಿದೆ. ಆದರೆ ನೆರೆಯ ತಮಿಳುನಾಡು ಸರಕಾರ ಕೇವಲ 4.78 ಕೋಟಿ ರೂ. ವೆಚ್ಚದಲ್ಲಿ 100 ವೆಂಟಿಲೇಟರ್ ಖರೀದಿಸಿದೆ. ಇಲ್ಲೇ ಹಗರಣದ ವಾಸನೆ ಸ್ಪಷ್ಟವಾಗಿ ಮೂಗಿಗೆ ಬಡಿಯುತ್ತದೆ. ರಾಜ್ಯದ ಅಧಿಕಾರಿಗಳು ಕಮಿಷನ್ ಗಾಗಿ ಮಾರುಕಟ್ಟೆ ದರ ಬದಲಿಗೆ 2- 3 ಪಟ್ಟು ಜಾಸ್ತಿ ಹಣ ತೆತ್ತು ವೆಂಟಿಲೇಟರ್ ಖರೀದಿಸಿದ್ದಾರೆ. ರಾಜಕಾರಣಿಗಳ ನೇರ ಹಸ್ತಕ್ಷೇಪವಿಲ್ಲದೆ ಇದು ಯಾವುದೂ ನಡೆಯುವ ಸಾಧ್ಯತೆಗಳಿಲ್ಲ. ಇದರಿಂದ ರಾಜ್ಯ ಬೊಕ್ಕಸಕ್ಕೆ 6.30 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಪಿಪಿಇ ಕಿಟ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳ ಖರೀದಿ ಬೆನ್ನಲ್ಲೇ ವೆಂಟಿಲೇಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಹೆಚ್ಚಿನ ಮಹತ್ವ ಪಡೆದಿದೆ. ಪ್ರತಿಪಕ್ಷಗಳು ಲೆಕ್ಕ ಕೇಳಲಾರಂಭಿಸಿದೆ.
ಪ್ರತಿ ವೆಂಟಿಲೇಟರ್ ಖರೀದಿಗೆ ಕೆಡಿಎಲ್ ಡಬ್ಲ್ಯೂಎಸ್ 18.20 ಕೋಟಿ ರೂ. ಪಾವತಿಸಿದೆ. ಇದು ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಜಾಸ್ತಿಯಾಗಿದೆ. ಪ್ರತಿಯೊಂದು ವೆಂಟಿಲೇಟರ್ ಗಳನ್ನು ಒಂದೊಂದು ದರದಲ್ಲಿ ಖರೀದಿಸಲಾಗಿದೆ. ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಪ್ರತಿ ವೆಂಟಿಲೇಟರ್ ನಲ್ಲಿ ಲಕ್ಷಾಂತರ ರೂ. ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ. ವಿಶೇಷವೆಂದರೆ 200 ವೆಂಟಿಲೇಟರ್ ಗಳಲ್ಲಿ 40 ವೆಂಟಿಲೇಟರ್ ಇನ್ನೂ ಪೂರೈಕೆಯಾಗಿಲ್ಲ. ಖರೀದಿ ಮಾಡಲಾದ ವೆಂಟಿಲೇಟರ್ ಗಳನ್ನು ರಾಜ್ಯದ ಯಾವ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯೂ ಇಲ್ಲ. ಪೂರೈಕೆದಾರ ಕಂಪನಿಯ ಹೆಸರೂ ಕೂಡ ಇಲ್ಲ.