ಇತ್ತೀಚಿನ ಸುದ್ದಿ
ಯಡಿಯೂರಪ್ಪ ಸಂಪುಟ ಶೀಘ್ರ ವಿಸ್ತರಣೆ: ಕೋಟಗೆ ಖೋಕ್, ಅಂಗಾರ, ಹಾಲಾಡಿಗೆ ಮಂತ್ರಿಗಿರಿ ?
July 28, 2020, 5:50 AM

ಅನುಷ್ ಪಂಡಿತ್ ಮಂಗಳೂರು
info. reporterkarnataka@gmail.com
ಬಿಜೆಪಿಯೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಹೋಗಲಾಡಿಸಲು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಕರಾವಳಿಯ ಹಿರಿಯ ಶಾಸಕರಾದ ಎಸ್. ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪುಟದಿಂದ ಕೈಬಿಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಸುಳ್ಯ ವಿಧಾನಸಭೆ ಕ್ಷೇತ್ರದಿಂದ ಸತತ 6 ಬಾರಿ ಆಯ್ಕೆಗೊಂಡಿರುವ ಅಂಗಾರ ಅವರು ದಕ್ಷಿಣ ಕನ್ನಡ ಬಿಜೆಪಿ ಪಾಳಯದ ಅತ್ಯಂತ ಹಿರಿಯ ಶಾಸಕ. ಆದರೆ ಜಾತಿ ಪ್ರಭಾವವಿಲ್ಲದೆ ಅವರು ಕಳೆದ 30 ವರ್ಷಗಳ ರಾಜಕೀಯ ಜೀವನದಲ್ಲಿ ಮೂಲೆ ಗುಂಪಾದ್ದೇ ಹೆಚ್ಚು. ಆದರೆ ಕಳೆದ ಬಾರಿ ಸಂಪುಟ ರಚನೆ ಸಂದರ್ಭದಲ್ಲಿ ಅಂಗಾರ ಅವರ ಹೆಸರು ಪ್ರವರ್ಧಮಾನಕ್ಕೆ ಬಂದಿತ್ತು. ಇನ್ನೇನು ಅಂಗಾರ ಅವರು ಅಧಿಕಾರ ವಹಿಸಿಕೊಂಡು ಬಿಟ್ಟರು ಎನ್ನುವಷ್ಟರಲ್ಲಿ ಮಂತ್ರಿಗಿರಿ ಕೈ ತಪ್ಪಿ ಹೋಯಿತು. ಇದೀಗ ಸಂಪುಟ ವಿಸ್ತರಣೆಯಲ್ಲಿ ಅಂಗಾರ ಅವರಿಗೆ ಪ್ರಾತಿನಿಧ್ಯ ಕೊಡುವ ಮಾತು ಕೇಳಿ ಬರುತ್ತಿದೆ.
ಇನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ. ಒಂದು ಬಾರಿ ಬಿಜೆಪಿ ಜತೆ ಮುನಿಸಿಕೊಂಡು ಪಕ್ಷೇತರನಾಗಿ ಸ್ಪರ್ಧಿಸಿಯೂ ಜಯಗಳಿಸಿದ್ದರು. ಸರಳ, ಸಜ್ಜನ ರಾಜಕಾರಣಿಯಾದ ಅವರಿಗೆ ಈ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಗಿರಿ ಒಲಿಯುವ ಮಾತು ಕೇಳಿ ಬರುತ್ತಿದೆ. ಆದರೆ ಉಡುಪಿ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ. ಒಂದೇ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೈಬಿಟ್ಟು ಹಾಲಾಡಿಗೆ ಪಟ್ಟ ಕಟ್ಟುವ ಸಿದ್ಧತೆ ನಡೆದಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಂಪುಟ ವಿಸ್ತರಣೆಯಲ್ಲಿ ಅಂಗಾರ ಮತ್ತು ಹಾಲಾಡಿ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ದಿಲ್ಲಿಯ ವರಿಷ್ಠರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.