ಇತ್ತೀಚಿನ ಸುದ್ದಿ
ಮಾಧವನ ಭಕ್ತಿಯಲಿ…. |ರಚನೆ-ಸವಿತಾ ಎಸ್.ಪಿ.ತುಮಕೂರು|
August 11, 2020, 8:19 AM

ಮುದದಿ ಗೋಪಿಯರ ಮನವ ಕದ್ದ ನವನೀತ ಚೋರನೇ ಕೃಷ್ಣಾ!
ತಾಯ್ಗೆ ಬಾಯಲ್ಲೆ ಜಗವ ತೋರಿದೆಯ ಮುದ್ದು ಗೋಪನೇ ಕೃಷ್ಣಾ!!
ತೋರು ಬೆರಳಿನಲಿ ಗಿರಿಯನ್ನೆತ್ತಿದೆಯ ಸಲಹಿ ಗೋವುಗಳ ಕೃಷ್ಣಾ!
ವಧಿಸಿಯುರಗವನು ಶಿರವ ತುಳಿತುಳಿದು ಕುಣಿದು ನರ್ತಿಸಿದೆ ಕೃಷ್ಣಾ!!
ಕೊಳಲ ಉಸಿರಿನಲಿ ಉಸಿರು ಬೆರೆಸುತಲಿ ನಲಿಸಿ(ಒಲಿಸಿ) ರಾಧೆಮನ ಕೃಷ್ಣಾ!
ಸನಿಹ ಸೆಳೆಯುತಲಿ ಬಳಸಿ ಅಂಗನೆಯ ತುಟಿಯ ಬಂಧಿಸಿದೆ ಕೃಷ್ಣಾ!!
ಮೆರೆವ ರಕ್ಕಸರ ಮಣ್ಣು ಮುಕ್ಕಿಸಿದೆ ಸಮರ ನಿಪುಣನೀ ಕೃಷ್ಣಾ!
ದಾರಿ ತೋರುತಲಿ ವೀರ ಪಾಂಡವರ,
ಗೆಲ್ಲಿಸಿದೆಯೊ ನೀ ಕೃಷ್ಣಾ!!
ಬಿಡದೆ ಬಾಧಿಸಿಹ ಭವದ ಮೋಹಗಳ
ಕಡಿದು ಕನಿಕರಿಸೊ ಕೃಷ್ಣಾ!
ದುರಿತ ರಾಶಿಯನು
ದಹಿಸಿ ಪಾಲಿಸೋ,
ಧರ್ಮಮೂರ್ತಿ ಶ್ರೀ ಕೃಷ್ಣಾ!!
ಅರ್ಥವರಿಯೆ ಪರಮಾರ್ಥ ತಿಳಿಯೆ,
ನಿನ ಪರಮಭಕ್ತೆ ನಾ
ಕೃಷ್ಣಾ!!
ತಡವದೇತಕೋ ಬಡವಿ ನಾನು ದಡವನ್ನು ಸೇರಿಸೋ ಕೃಷ್ಣಾ!!
?ಸವಿತಾ ಎಸ್. ಪಿ. ತುಮಕೂರು