ಇತ್ತೀಚಿನ ಸುದ್ದಿ
ಮಾಜಿ ಸಿಎಂ ಸಿದ್ಧು ಹಾಗೂ ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್ ಜಾರಿ
July 31, 2020, 1:34 PM

ಬೆಂಗಳೂರು (reporter Karnataka news)
ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಬಿಜೆಪಿ ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಸರ್ಕಾರದ ಮೇಲೆ ನಿರಾಧಾರ ಆರೋಪ ಹೊರಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರಲು ಒತ್ತಾಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಎಂಎಲ್ಸಿ ಎನ್. ರವಿಕುಮಾರ್ ಮತ್ತು ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಲೀಗಲ್ ನೋಟಿಸ್ಗೆ 15 ದಿನದೊಳಗೆ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿರುವ ಸಂಬಂಧ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇವತ್ತು ನಮಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಅವರು ಕೊಡಲಿ ಅಂತಾನೇ ನಾನೂ ಕಾಯುತ್ತಿದ್ದೆ. ನಾವು ಆರೋಪ ಮಾಡಿರೋದು ಸರ್ಕಾರದ ವಿರುದ್ಧ. ನಮಗೆ ನೋಟಿಸ್ ಕೊಡಬೇಕಾದ್ದು ಚೀಫ್ ಸೆಕ್ರೆಟರಿ. ಆದರೆ, ಲೀಗಲ್ ನೋಟಿಸ್ ಕೊಟ್ಟಿರೋದು ಬಿಜೆಪಿ. ಒಬ್ಬ ಎಂಎಸ್ಸಿ ಕೈಲಿ ಲೀಗಲ್ ನೋಟಿಸ್ ಕೊಡಿಸಿದ್ದಾರೆ. ಇದನ್ನು ಸಿಎಂ, ಡಿಸಿಎಂ, ಸಚಿವರು ಕೊಡಬೇಕು. ಆದರೂ ಬಿಜೆಪಿಯಿಂದ ಕೊಡಿಸಿದ್ದಾರೆ’ ಎಂದರು.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ಕೊಟ್ಟ ನೋಟಿಸ್ಗೆ ಉತ್ತರ ಕೊಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲ ದಾಖಲೆಯೂ ಇದೆ. ಕರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭ್ರಷ್ಟಾಚಾರ. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.