10:35 PM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಬದುಕಿನ ಮ್ಯಾಚಲ್ಲಿ ಸೋತರೂ ಕ್ರಿಕೆಟಿನ ಕ್ಯಾಚಲ್ಲಿ ಗೆದ್ದ ದಿಗ್ಗಜನೊಬ್ಬನ ಕಥೆ : 1939ರ ಜುಲೈ 25ಕ್ಕೆ ಏನಾಗಿತ್ತು.?

July 25, 2020, 2:13 AM

ಗಣೇಶ್ ಅದ್ಯಪಾಡಿ
info.reporterkarnataka@gmail.com

ಜಗತ್ತಿನೆಲ್ಲೆಡೆ ಒಂದು ಕಡೆ ಎರಡನೇ ವಿಶ್ವಯುದ್ಧದ ಕರಿಛಾಯೆ ಮೂಡಿದ್ದ ಸಮಯವದು. ಕ್ರೀಡೆಯ ಮೇಲೂ ವಿಶ್ವಯುದ್ಧ ವ್ಯತಿರಿಕ್ತ ಪರಿಣಾಮ ಬೀಳಲು ಪ್ರಾರಂಭಿಸಿತ್ತು.
ಅದು 1939ರ ಜುಲೈ 25ನೇ ತಾರೀಕು ಇಂದಿಗೆ ಸರಿಯಾಗಿ ಎಂಬತ್ತೊಂದು ವರ್ಷದ ಹಿಂದಿನ ದಿನ. ಹೌದು ಇದೇ ದಿನ ಅಂತಹದೊಂದು ಮೈಲಿಗಲ್ಲು ಸ್ಥಾಪನೆಯಾಯ್ತು. ಅಂತಾರಾಷ್ಟ್ರೀಯ ಎಲ್ಲಾ ವಿಧದ ಪಂದ್ಯಗಳನ್ನು ಸೇರಿಸಿ ಮೊದಲ ನೂರು ಶತಕಗಳನ್ನು ದಾಖಲಿಸಿದ್ದು ಯಾರೆಂದು ಕೇಳಿದರೆ ಪಟ್ಟನೆ ಸಚಿನ್ ತೆಂಡೂಲ್ಕರ್ ಎಂದು ಉತ್ತರ ನೀಡಬಹುದು ಆದರೆ ಆ ದಿನ ದಾಖಲಾದ ದಾಖಲೆಯೆ ಬೇರೆ.
ಯಸ್ ಅದು ನೂರನೇ ಕ್ಯಾಚ್‌ನ ದಾಖಲೆ, ಮೊದಲ ಬಾರಿಗೆ ವಿಕೇಟ್ ಕೀಪರ್ ಅಲ್ಲದ ಕ್ಷೇತ್ರರಕ್ಷಕನೋರ್ವ ನೂರನೇ ಕ್ಯಾಚ್ ಹಿಡಿದ ದಿನ ಅ(ಇ)ದು.

ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿದ್ದ ಎರಡನೇ ಪಂದ್ಯ, ಮಳೆ ಹಾಗೂ ಕೆಟ್ಟ ಬೆಳಕಿಂದ ಆವರಿಸಿದ್ದ ಈ ಪಂದ್ಯ ಪೂರ್ತಿಯಾಗಿ ಯಾವ ದಿನಾನೂ ನಡೆಯಲಿಲ್ಲ ಲೋ ಸ್ಕೋರಿಂಗ್ ಟೆಸ್ಟ್ ಆದ ಇದ್ರಲ್ಲಿ ಇದರ ಹಿಂದಿನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಸತತ ಎರಡು ಇನ್ನಿಂಗ್ಸಲ್ಲಿ ಶತಕ ದಾಖಲಿಸಿದ್ದ ಜಾರ್ಜ್ ಹೆಡ್ಲಿ ಪಿಚ್ ಮದ್ಯದಲ್ಲಿ ಇದ್ದರು, ಬಿಲ್ ಕಾಪ್ಸನ್ ಎಸೆದ ಆ ಎಸೆತದಲ್ಲಿ ಹೆಡ್ಲಿ ಬ್ಯಾಟ್ ಟಚ್ ಮಾಡಿದ ಬಾಲ್ ಸ್ಲಿಪ್‌ನಲ್ಲಿದ್ದ ಇಂಗ್ಲಂಡ್ ದಿಗ್ಗಜ್ಜ ಕ್ರಿಕೆಟಿಗ ವ್ಯಾಲಿ ಹ್ಯಾಮಂಡ್ ಕೈ ಸೇರಿತು. ಇದು ಅವರ ನೂರನೇ ಕ್ಯಾಚ್ ಹಾಗೂ ಜಗತ್ತಲ್ಲಿ ಮೊದಲ ಬಾರಿಗೆ ಫೀಲ್ಡರ್ ಒಬ್ಬ ನೂರನೇ ಕ್ಯಾಚ್ ಪಡೆದ ಮೈಲಿಗಲ್ಲೊಂದು ನಿರ್ಮಾಣವಾಯಿತು.


ಇಂದು ಈ ಪಟ್ಟಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ 214 ಟೆಸ್ಟ್ ಕ್ಯಾಚ್ ಪಡೆದು ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ ಆದರೆ ಈ ಒಂದು ದಾಖಲೆಗಳ ಸರಮಾಲೆ ಆರಂಭಿಸಿದ ವ್ಯಾಲಿ ಹ್ಯಾಮಂಡ್ ಅಗ್ರಗಣ್ಯನಾಗಿ ಉಳಿಯುತ್ತಾರೆ


ಅದ್ಭುತ ಆಲ್ ರೌಂಡರ್ :
ಇಂಗ್ಲಂಡ್ ಕ್ರಿಕೆಟ್ ತಂಡ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ ಅಮೋಘ ಕೌಶಲ ಪ್ರದರ್ಶಿಸಿದ್ದ ಈ ದಿಗ್ಗಜ ಕೇವಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೇ ಒಟ್ಟು 167 ಶತಕಗಳನ್ನು ತನ್ನ ಕ್ರಿಕೆಟ್ ಯಾನದಲ್ಲಿ ದಾಖಲಿಸಿದ್ದರು. ಡಾನ್ ಬ್ರಾಡ್ಮನ್ ಹಾಗೂ ಹ್ಯಾಮಂಡ್ ನಡುವೆ ತೀವ್ರ ಪೈಪೋಟಿ ಇದ್ದಂತಹ ಕಾಲಘಟ್ಟ ಅದು ಆದರೆ ಒಂದು ರೀತಿ ಅನಿಶ್ಚಿತತೆಯ ಬದುಕು ಹಾಗೂ ದುರದೃಷ್ಟ ಅನ್ನೋದು ವ್ಯಾಲಿ ಹ್ಯಾಮಂಡ್ ಕ್ರಿಕೆಟ್ ಬದುಕು ಇನ್ನಷ್ಟು ಹೆಚ್ಚಿನ ಯಶಸ್ಸು ಕಾಣಲು ಬಿಡಲಿಲ್ಲವೇನೊ ಎನ್ನುವ ಹಾಗಿದೆ.
ಒಟ್ಟಾರೆಯಾಗಿ ಇಂಗ್ಲಂಡ್ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 58.45ರ ಸರಾಸರಿಯಲ್ಲಿ 7,249 ರನ್‌ಗಳನ್ನು ದಾಖಲಿಸಿದ್ದು ಇಪ್ಪತ್ತೆರಡು ಶತಕಗಳು, 24 ಅರ್ಧ ಶತಕ ಮೂರು ತ್ರಿವಳಿ ಶತಕಗಳೂ ಇವರ ಹೆಸರಲ್ಲಿದೆ. ಅದರಲ್ಲಿ 336 ಇವರ ಅತ್ಯಧಿಕ ಸ್ಕೋರ್ ಡಾನ್ ಬ್ರಾಡ್ಮನ್‌ ಅವರ ಅತ್ಯಧಿಕ ರನ್‌ಗಿಂತಲೂ ಎರಡು ರನ್ ಹೆಚ್ಚು ..! ಡಾನ್ ಬ್ರಾಡ್ಮನನ್ನು ಈಗಲೂ ನೆನಪಿಸಿಕೊಳ್ಳುವ ಕ್ರಿಕೆಟ್ ಜಗತ್ತು ಯಾಕೆ ಹ್ಯಾಮಂಡ್‌ನಂತಹ ಅಮೋಘ ಕ್ರಿಕೆಟಿಗನನ್ನು ಪರದೆಯಾಚೆಗೆ ಇಡುತ್ತಿದೆ ಎಂದು ಗೊತ್ತಾಗುವುದಿಲ್ಲ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲು ತನ್ನ ಪ್ರಾಬಲ್ಯ ಕಾಣಿಸಿದ್ದ ಹ್ಯಾಮಂಡ್ 83 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದು, ಎರಡು ಬಾರಿ ಐದು ವಿಕೆಟ್ ಗೊಂಚಲಿಗೆ ಬಲೆ ಬೀಸಿದ್ದರು. ಪ್ರಥಮ ದರ್ಜೆ ಕ್ರಿಕೆಟಿನಲ್ಲಿ 50,551 ರನ್ ದಾಖಲಿಸಿದ್ದ ಹ್ಯಾಮಂಡ್ 732 ವಿಕೆಟ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರು.

ಆರ್ಮಿ ಮತ್ತೆ ಕ್ರಿಕೆಟ್
ವ್ಯಾಲಿ ಹ್ಯಾಮಂಡ್ (ವಾಲ್ಟರ್ ರಜಿನಾಲ್ ಹ್ಯಾಮಂಡ್) ಅವರ ತಂದೆ ರಾಯಲ್ ತುಪಾಕಿ ಸೈನ್ಯದಲ್ಲಿ ಅಧಿಕಾರಿಯಾಗಿದ್ದರಿಂದ ಹ್ಯಾಮಂಡ್‌ಗೂ ಕೂಡ ಸೈನ್ಯದ ಶಿಸ್ತಿನ ವಾತಾವರಣ ಸಾಮಾನ್ಯವಾಗಿತ್ತು. ವೈಯುಕ್ತಿಕವಾಗಿ ಅಂತರ್ಮುಖಿಯಾಗಿದ್ದ ಹ್ಯಾಮಂಡ್‌ಗೆ ಅಂತಹ ಸ್ನೇಹಿತರು ಯಾರೂ ಇರಲಿಲ್ಲ ವೈವಾಹಿಕ ಜೀವನವನ್ನು ಅಷ್ಟೊಂದು ಸುಗಮವಾಗಿರಲಿಲ್ಲ. ವರ್ಲ್ಡ್ ವಾರ್ ಸಂದರ್ಭ ಕ್ರೀಡೆಯಾಚೆಗೆ ಸೇನೆಗೂ ಸೇರಿದ್ದ ಹ್ಯಾಮಂಡ್ ಏರ್ ಫೋರ್ಸ್‌ನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈಜಿಪ್ಟಿನ ಕೈರೊದಲ್ಲಿ ಹಲವು ಸಮಯದವರೆಗೆ ಕರ್ತವ್ಯ ನಿರ್ವಹಿಸಿ ಬಳಿಕ ಇಂಗ್ಲಂಡಿಗೆ ವಾಪಾಸಾಗಿ ಮತ್ತೆ ಕ್ರಿಕೆಟ್ ಶುರು ಮಾಡಿಕೊಂಡಿದ್ದರು.

ದುರಂತ ಅಂತ್ಯ
ತನ್ನ ಇಪ್ಪತ್ತು ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಏರು ಪೇರುಗಳನ್ನು ಕಂಡ ಹ್ಯಾಮಂಡ್ ಇಂಗ್ಲೆಂಡ್ ತಂಡದ ನಾಯಕರಾಗಿ ಇಪ್ಪತ್ತು ಪಂದ್ಯಗಳನ್ನು ಆಡಿದ್ದರು ನಾಲ್ಕರಲ್ಲಿ ಗೆಲುವು ಮೂರು ಸೋಲು ಹಾಗೂ ಹದಿಮೂರು ಡ್ರಾ ಇದು ಅವರ ನಾಯಕನಾಗಿ ಕ್ರಿಕೆಟ್ ಸಾಧನೆ. ತನ್ನ ಬದುಕಲ್ಲಿ ಮಾತ್ರ ಅವರು ನಾಯಕರಾಗಲು ಸಾಧ್ಯವಾಗಲೇ ಇಲ್ಲ. ಗಳಿಸಿದ ಹಣವನ್ನು ಸರಿಯಾಗಿ ವಿನಿಯೋಗಿಸದೆ ವ್ಯವಹಾರಗಳು ಕೈಕೊಡುತ್ತಿದ್ದರೂ 1947ರ ಮಾರ್ಚ್ ವರೆಗೆ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳ ಸಂಭಾವನೆ ಬದುಕನ್ನು ಸುಸ್ಥಿರಗೊಳಿಸಿತ್ತಾದರೂ ಅವರ ನಂತರದ ಬದುಕು ಮಾತ್ರ ಬಹಳ ಕಠಿಣವಾಗಿತ್ತು.
ಬಿಸ್‌ನೆಸ್ ಆರಂಭಿಸುವುದಕ್ಕಾಗಿ ಸೌತ್ ಆಫ್ರಿಕಾಕ್ಕೆ ಹೋದ ಹ್ಯಾಮಂಡ್ ಅಲ್ಲೂ ಅಷ್ಟೊಂದು ಯಶಸ್ವಿಯಾಗುವುದಿಲ್ಲ ಕೊನೆಗೆ ಸ್ಪೋರ್ಟ್ಸ್ ಆಡಳಿತಗಾರನಾಗಿ ಕಾರ್ಯಾರಂಭಿಸಿದಾಗ ಸಂಭವಿಸಿದ ಭೀಕರ ಕಾರ್ ಅಪಘಾತ ಅವರನ್ನು ಸಂಪೂರ್ಣ ಕುಗ್ಗುವಂತೆ ಮಾಡಿತು. ಆರ್ಥಿಕವಾಗಿಯೂ ಅವರ ಕುಟುಂಬ ಬಹಳ ಹೀನಾಯ ಸ್ಥಿತಿಗೆ ತಲುಪಿತು. 1965 ರಲ್ಲಿ ತನ್ನ 62ನೇ ವಯಸ್ಸಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಸೌತ್ ಆಫ್ರಿಕಾದಲ್ಲಿ ಕೊನೆಯುಸಿರನ್ನೆಳೆದರು. ಅವರ ಕುಟುಂಬ ಈ ಸಂದರ್ಭ ತೀವ್ರ ಸಂಕಟವನ್ನು ಎದುರಿಸುತ್ತಿತ್ತು ಅವರ ಸಹಾಯಕ್ಕಾಗಿ ಟ್ರಸ್ಟ್ ಒಂದು ಸ್ಥಾಪನೆಯಾಯಿತು. ಅದಕ್ಕೆ ಹೆಚ್ಚಿನ ಅನುದಾನಕ್ಕೆ ಕಾರಣವಾದವರು ಹ್ಯಾಮಂಡ್ ಅವರ ಮಾನಸಿಕ ವೈರಿ ಡಾನ್ ಬ್ರಾಡ್ಮನ್..!!!!

ಇತ್ತೀಚಿನ ಸುದ್ದಿ

ಜಾಹೀರಾತು