ಇತ್ತೀಚಿನ ಸುದ್ದಿ
ಬಡ್ತಿಯಲ್ಲಿ ಕೂಡ ಹಿಂಬಡ್ತಿ: ಇದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಥಿತಿ
August 2, 2020, 5:37 AM

ಬೆಂಗಳೂರು(reporterkarnataka news):
ಬಿಜೆಪಿ ಪ್ರಧಾನ ಕಾರ್ಯದರ್ಶಿ ಪದವಿ ಮೇಲೆ ಗುರಿ ಇಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಬಡ್ತಿ ನೀಡಲಾಗಿದೆ. ಆದರೆ ಅಧಿಕಾರ ಮೊಟಕುಗೊಳಿಸಲಾಗಿದೆ.
ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷದಲ್ಲಿ ಉಪಾಧ್ಯಕ್ಷರಿಗೆ ಹೇಳಿ ಕೊಳ್ಳುವಂತಹ ಅಧಿಕಾರ ಇಲ್ಲ. ಇದು ಹೆಸರಿಗಷ್ಟೇ ಸೀಮಿತ. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಮಹತ್ವದಾಗಿದೆ. ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಉತ್ತಾರಾಧಿಕಾರಿ ಎಂದೇ ಬಿಂಬಿಸಲು ಬಿಜೆಪಿ ಒಂದು ಬಣ ಪ್ರಯತ್ನಿಸುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿಯಲ್ಲಿ ಹಿಡಿತ ಸಾಧಿಸಿರುವ ಬಿ ಎಲ್ ಸಂತೋಷ್ ಬಣ ಬಿಜೆಪಿಯಲ್ಲಿ ಮುನ್ನೆಲೆಗೆ ಬಂದಿದೆ. ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಂಘ ಪರಿವಾರದ ಹಿನ್ನೆಲೆ ಮತ್ತು ಪಕ್ಷ ನಿಷ್ಠೆ ಮುಖ್ಯ ಅರ್ಹತೆಯಾಗಿ ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸಣ್ಣಪುಟ್ಟ ರಾಜಕೀಯ ಕಂಪನಕ್ಕೆ ಇದು ದಾರಿ ಮಾಡಿಕೊಡಲಿದೆ.
ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಗೆ ಕೂಡ ಉಪಾಧ್ಯಕ್ಷ ಪಟ್ಟ ಕರುಣಿಸಲಾಗಿದೆ. ಇದು ಬಿಜೆಪಿಯ ಒಂದು ಹೊಂದಾಣಿಕೆ ಸೂತ್ರದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದಿರುವ ವಿಜಯೇಂದ್ರ ಎಲ್ಲಿಯೂ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿಲ್ಲ. ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಹೊಸ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದಷ್ಟೇ ಪ್ರತ್ರಿಕ್ರಿಯಿಸಿದ್ದಾರೆ.
ಬಿಜೆಪಿಯಲ್ಲಿನ ಸಣ್ಣ ಸಣ್ಣ ಬೆಳವಣಿಗೆಗಳನ್ನು ನಿರ್ಲಕ್ಷಿಸುವಂತಿಲ್ಲ. ಸದ್ಯಕ್ಕೆ ಎಲ್ಲರೂ ಮಾಸ್ಕ್ ಧರಿಸಿ ನಗುವಿನ ಮುಖವಾಡದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಎಷ್ಟು ದಿನ ಎಂಬುದು ನಿರ್ಣಾಯಕವಾಗಿದೆ.